ನಗರದ ವಿಮಾನ ನಿಲ್ದಾಣದಲ್ಲಿ ರಿಯಾದ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನ ಹಾರಾಟಕ್ಕೆ ಸಿದ್ಧವಾಗುತ್ತಿರುವಂತೆ ಇಂಜಿನ್‌ನಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಅದೃಷ್ಟವಶಾತ್ 213 ಪ್ರಯಾಣಿಕರು ಹಾಗೂ ವಿಮಾನದಲ್ಲಿ ಕಾರ್ಯನಿರ್ವಹಿಸುತ್ತಿರುವ 16 ಮಂದಿ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಸಾವು ನೋವುಗಳಾಗಲಿ ಸಂಭವಿಸಿಲ್ಲ ಎಂದು ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ವಿಮಾನದಿಂದ ಕೆಳಗಿಳಿಸಲಾಯಿತು. ಬೋಯಿಂಗ್ 747-400 ವಿಮಾನದ ವೇಗವನ್ನು ತುರ್ತು ಬ್ರೇಕ್ ಮೂಲಕ ತಹಬದಿಗೆ ತರಲಾಯಿತು. ಪ್ರಯಾಣಿಕರೆಲ್ಲರು ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ 10.50 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರನ್ನು ಮತ್ತೊಂದು ವಿಮಾನದ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.