ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಮತ್ತು ಇನ್ನೂ ನಾಲ್ವರು ಮೃತಪಟ್ಟ ಬೆಲ್ 430 ಹೆಲಿಕಾಪ್ಟರ್‌ನ ಕಪ್ಪು ಪೆಟ್ಟಿಗೆ ಪತ್ತೆಯಾಗಿದೆಯೆಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಹೆಲಿಕಾಪ್ಟರ್ ಅಪಘಾತಕ್ಕೀಡಾದ ಕರ್ನೂಲು ಜಿಲ್ಲೆಯ ನಲ್ಲಮಲ್ಲಾ ಅರಣ್ಯ ಪ್ರದೇಶದಲ್ಲಿ ಕಪ್ಪು ಪೆಟ್ಟಿಗೆ ಅಥವಾ ಕಾಕ್‌ಪಿಟ್ ಧ್ವನಿಮುದ್ರಿಕೆ ಯಂತ್ರ ಪತ್ತೆಯಾಗಿದೆ.
ಅಪಘಾತಗೊಂಡ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಕ್ಸಲೀಯ ನಿಗ್ರಹ ಗ್ರೇಹೌಂಡ್ಸ್ ಪಡೆ ಕಪ್ಪುಪೆಟ್ಟಿಗೆಯನ್ನು ಪತ್ತೆಹಚ್ಚಿದ್ದು, ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ತಂಡಕ್ಕೆ ಹಸ್ತಾಂತರಿಸಿದ್ದಾರೆ. ಡಿಜಿಸಿಎ ವೈಎಸ್‌ಆರ್ ಹೆಲಿಕಾಪ್ಟರ್ ಅಪಘಾತ ಕುರಿತು ತನಿಖೆ ಆರಂಭಿಸಿದೆ. ಕಪ್ಪು ಪೆಟ್ಟಿಗೆ ಅಪಘಾತಕ್ಕೆ ಕಾರಣ ತಿಳಿಯುವ ತನಿಖೆಯಲ್ಲಿ ನೆರವಾಗುವುದೆಂದು ನಿರೀಕ್ಷಿಸಲಾಗಿದ್ದು, ಕಪ್ಪುಪೆಟ್ಟಿಗೆಯ ಮಾಹಿತಿಗಳನ್ನು ಹೊರತೆಗೆಯಲು ತನಿಖಾ ತಂಡವು ಅದನ್ನು ದೆಹಲಿಗೆ ಒಯ್ದಿದೆ.
ಅಪಘಾತಕ್ಕೆ ಮುಂಚೆ ಪೈಲಟ್‌ಗಳು ನೀಡಿದ ಕಟ್ಟಕಡೆಯ ಸಂದೇಶಗಳೇನು ಎನ್ನುವುದು ತನಿಖೆದಾರರಿಗೆ ತಿಳಿದುಬರಲಿದೆಯೆಂದು ಕರ್ನೂಲು ಜಿಲ್ಲೆಯ ಆತ್ಮಕೂರು ಕಂದಾಯ ವಿಭಾಗೀಯ ಅಧಿಕಾರಿ ಲಕ್ಷ್ಮಿಕಾಂತ್ ತಿಳಿಸಿದ್ದಾರೆ. ಆತ್ಮಕೂರು ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಕಂದಾಯ ಅಧಿಕಾರಿ ನೀಡಿದ ದೂರಿನ ಮೇಲೆ ಅಸಹಜ ಸಾವುಗಳ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ಅಪರಾಧ ನೀತಿ ಸಂಹಿತೆಯ ಸೆಕ್ಷನ್ 174ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.