ಬಿಜೆಪಿಯ ಉಚ್ಛಾಟಿತ ನಾಯಕ ಜಸ್ವಂತ್ ಸಿಂಗ್ ತನ್ನ 'ಜಿನ್ನಾ, ಭಾರತ, ವಿಭಜನೆ ಮತ್ತು ಸ್ವಾತಂತ್ರ್ಯ' ಪುಸ್ತಕದ ಪ್ರಚಾರಕ್ಕಾಗಿ ಸೆಪ್ಟೆಂಬರ್ 26ರಂದು ಪಾಕಿಸ್ತಾನಕ್ಕೆ ಭೇಟಿ ಕೊಡಲು ಭಾರತ ಸರಕಾರ ಅನುಮತಿ ನೀಡಿದೆ.
ಸೆಪ್ಟೆಂಬರ್ 26ರಂದು ಕರಾಚಿಗೆ ಹೋಗಲಿರುವ ಜಸ್ವಂತ್, ಮರುದಿನ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ. ಅಲ್ಲಿನ ಪ್ರೆಸ್ ಕ್ಲಬ್‌ನಲ್ಲಿ ತನ್ನ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಪಾಲ್ಗೊಳ್ಳುವರು.
PTI
'ಜಿನ್ನಾ, ಭಾರತ, ವಿಭಜನೆ ಮತ್ತು ಸ್ವಾತಂತ್ರ್ಯ' ಪುಸ್ತಕದಲ್ಲಿ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರನ್ನು ಹೊಗಳಿದ ಕಾರಣಕ್ಕಾಗಿ ಬಿಜೆಪಿಯಿಂದ ಹೊರ ಹಾಕಲಾಗಿತ್ತು.
ನಂತರದ ದಿನಗಳಲ್ಲಿ ಪುಸ್ತಕಕ್ಕೆ ಭಾರೀ ಬೇಡಿಕೆ ಬಂದ ಕಾರಣ ಪಾಕಿಸ್ತಾನಕ್ಕೆ ಬರುವಂತೆಯೂ ಆಹ್ವಾನ ನೀಡಲಾಗಿತ್ತು. ಇಸ್ಲಾಮಾಬಾದ್‌ನ ಮಿ. ಬುಕ್ಸ್ ಎಂಬ ಪುಸ್ತಕಾಲಯದ ಮಾಲಿಕ ಹಾಗೂ ಪ್ರಕಾಶಕ ಮೊಹಮ್ಮದ್ ಯೂಸುಫ್ ಎಂಬುವವರು ಜಸ್ವಂತ್‌ಗೆ ಆಹ್ವಾನ ನೀಡಿದ್ದರು.
ಕಳೆದ ಹಲವು ದಿನಗಳಿಂದ ಭಾರತದ ಸರಕಾರದ ಅನುಮತಿಗಾಗಿ ಕಾಯುತ್ತಿದ್ದ ಜಸ್ವಂತ್ ಸಿಂಗ್, ಶನಿವಾರ ಸರಕಾರದಿಂದ ಅನುಮತಿ ಪಡೆದುಕೊಂಡಿದ್ದಾರೆ. ಸೆ.26ರಂದು ಅವರು ಪಾಕಿಸ್ತಾನ ತಲುಪಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿಯಿಂದ ಜಸ್ವಂತ್‌ರನ್ನು ಉಚ್ಛಾಟನೆಗೊಳಿಸಿದ ಬೆನ್ನಿಗೆ ಗುಜರಾತ್ ನರೇಂದ್ರ ಮೋದಿ ಸರಕಾರವು ಪುಸ್ತಕದ ಮೇಲೆ ನಿಷೇಧ ಹೇರಿತ್ತು. ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತದೆ ಎಂಬುದು ಅದರ ಆರೋಪವಾಗಿತ್ತು. ಆದರೆ ಅಹಮದಾಬಾದ್ ಹೈಕೋರ್ಟ್ ಸರಕಾರದ ವಾದವನ್ನು ತಳ್ಳಿ ಹಾಕಿದ್ದು, ನಿಷೇಧವನ್ನು ತೆರವುಗೊಳಿಸಿದೆ.