26/11 ತನಿಖೆ ಹತ್ತಿಕ್ಕುತ್ತಿರುವ ಪಾಕಿಸ್ತಾನ: ಚಿದಂಬರಂ ಕಿಡಿ
ನವದೆಹಲಿ, ಭಾನುವಾರ, 6 ಸೆಪ್ಟೆಂಬರ್ 2009( 12:04 IST )
ಮುಂಬೈ ಉಗ್ರರ ದಾಳಿಯ ತನಿಖೆಯನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಹತ್ತಿಕ್ಕುತ್ತಿದೆ ಎಂದು ಭಾರತ ಆರೋಪಿಸಿದೆ. 26/11ರ ರೂವಾರಿಗಳ ಕುರಿತು ನೆರೆ ರಾಷ್ಟ್ರಕ್ಕೆ ಸಂಪೂರ್ಣ ಮಾಹಿತಿಗಳನ್ನು ನೀಡಲಾಗಿದ್ದರೂ ಅವರನ್ನು ಬಂಧಿಸುವ ಅಥವಾ ವಿಚಾರಣೆ ನಡೆಸುವ ಯಾವುದೇ ಕಾರ್ಯವನ್ನು ಪಾಕ್ ಮಾಡುತ್ತಿಲ್ಲ; ಉಗ್ರರಿನ್ನೂ ಅವರ ನೆಲದಲ್ಲೇ ಓಡಾಡಿಕೊಂಡಿದ್ದಾರೆ ಎಂದು ಗೃಹಸಚಿವ ಪಿ. ಚಿದಂಬರಂ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ತಾನು ಭಯೋತ್ಪಾದನೆಯ ವಿರುದ್ಧ ಗಂಭೀರ ನಿಲುವು ತಳೆದಿದ್ದೇನೆ ಎಂಬುದನ್ನು ಪಾಕಿಸ್ತಾನವು ನವದೆಹಲಿ ಮತ್ತು ಜಗತ್ತಿಗೆ ತೋರಿಸಬೇಕು. ಮಾತುಕತೆ ಪುನರಾರಂಭ ವಿಳಂಬಕ್ಕೆ ಪಾಕಿಸ್ತಾನವೇ ನೇರ ಹೊಣೆ ಎಂದು ಭಾರತವು ವಾಗ್ದಾಳಿ ನಡೆಸಿದೆ.
ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮುಂಬೈ ದಾಳಿಯಲ್ಲಿ ವಹಿಸಿರುವ ಪಾತ್ರದ ಕುರಿತು ಸಾಕಷ್ಟು ದಾಖಲೆ ಮತ್ತು ಮಾಹಿತಿಗಳನ್ನು ಇಸ್ಲಾಮಾಬಾದ್‌ಗೆ ಹಸ್ತಾಂತರಿಸಿರುವುದನ್ನೂ ಇದೇ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ನೆನಪಿಸಿದ್ದಾರೆ.
ಮುಂಬೈ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರಗಾಮಿಗಳ ಜತೆ ಆತ ಸಮಾಲೋಚನೆ ನಡೆಸಿರುವುದು ಮತ್ತು ಅವರಿಗೆ ತರಬೇತಿ ನೀಡುವ ಉಸ್ತುವಾರಿ ವಹಿಸಿಕೊಂಡಿರುವ ಮಾಹಿತಿಯನ್ನು ನಾವು ಈಗಾಗಲೇ ಪಾಕಿಸ್ತಾನಕ್ಕೆ ನೀಡಿದ್ದೇವೆ ಎಂದು ಚಿದಂಬರಂ ತಿಳಿಸಿದರು.
ಆದರೆ ಪಾಕಿಸ್ತಾನ ನೀಡುತ್ತಿರುವ ಪ್ರತಿಕ್ರಿಯೆಯು ನಮಗೆ ಸಂಪೂರ್ಣ ನಿರಾಸೆಯನ್ನುಂಟು ಮಾಡಿದೆ. ಅವರಿಗೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಇಚ್ಛಾಶಕ್ತಿಯಿಲ್ಲ. ತನಿಖೆಯನ್ನು ಕೈ ಬಿಡಲು ಅದು ಯತ್ನಿಸುತ್ತಿದೆ ಎಂದು ಆಲ್ ಜಝೀರಾ ಟೀವಿ ವಾಹಿನಿಯ ಜತೆ ಮಾತನಾಡುತ್ತಾ ಸಚಿವರು ನೆರೆಯ ದೇಶವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನಾವು ನೀಡಿರುವ ದಾಖಲೆಗಳು ಮತ್ತು ಮಾಹಿತಿಗಳನ್ನಾಧರಿಸಿ ಆರೋಪಿಗಳನ್ನು ಬಂಧಿಸುವ ಅಥವಾ ಶಿಕ್ಷಿಸುವ ಕಾರ್ಯಕ್ಕೆ ಇಸ್ಲಾಮಾಬಾದ್ ಮುಂದಾಗುತ್ತಿಲ್ಲ. ನಾವು ಆರೋಪಿಗಳ ಹೆಸರನ್ನು ಕೂಡ ನೀಡಿದ್ದೇವೆ ಎಂದರು.
ಮುಂಬೈ ದಾಳಿಯ ತನಿಖೆಯನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಹತ್ತಿಕ್ಕುತ್ತಿದೆಯೇ ಎಂಬ ಪ್ರಶ್ನೆಗೆ ಸಚಿವರು, ಹೌದು ಎಂದು ಉತ್ತರಿಸಿದ್ದಾರೆ.