ಚೀನಾ ಮಿಲಿಟರಿಯಿಂದ ಭಾರತದ ಭೂಪ್ರದೇಶ ಅತಿಕ್ರಮಣ
ಲೇಹ್, ಜಮ್ಮು ಕಾಶ್ಮೀರ, ಭಾನುವಾರ, 6 ಸೆಪ್ಟೆಂಬರ್ 2009( 17:04 IST )
ಭಾರತೀಯ ವಾಯು ಪ್ರದೇಶದ ಮೇಲೆ ಅತಿಕ್ರಮವಾಗಿ ಹೆಲಿಕಾಫ್ಟರ್‌ಗಳನ್ನು ನುಗ್ಗಿಸಿದ ಪ್ರಕರಣ ತಣ್ಣಗಾಗುವ ಮೊದಲೇ ಚೀನಾ ಸೇನೆಯು ಲಡಾಖ್ ಪ್ರಾಂತ್ಯದಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆಯನ್ನು ಉಲ್ಲಂಘಿಸಿದೆ. ಅಲ್ಲದೆ ಈ ಪ್ರದೇಶದಲ್ಲಿ ಕೆಂಪು ಬಣ್ಣದಿಂದ 'ಚೀನಾ' ಎಂದು ಬರೆಯಲಾಗಿದೆ.
ಚೀನಾ ಮತ್ತು ಭಾರತಗಳು ಗುರುತಿಸಿರುವ ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿರುವ ಚೀನಾ ಮಿಲಿಟರಿ ಪಡೆಗಳು ಮೌಂಟ್ ಗಯಾ ಪ್ರಾಂತ್ಯದ ಸುಮಾರು 1.5 ಕಿಲೋ ಮೀಟರ್‌ಗಳಷ್ಟು ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದು, ಈ ಪ್ರದೇಶದಲ್ಲಿ ಕಲ್ಲುಗಳ ಮೇಲೆ ಕೆಂಪು ಬಣ್ಣದಿಂದ ಚೀನಾದ ಗುರುತು ಹಾಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೇಹ್ ಜಿಲ್ಲೆಯ ಪೂರ್ವ ಪ್ರದೇಶದ ಚುಮಾರ್ ವಲಯದಲ್ಲಿನ ಎಲ್ಲಾ ಕಲ್ಲು-ಬಂಡೆಗಳ ಮೇಲೆ ಕಾಂಟೊನೀಸ್ ಭಾಷೆಯಲ್ಲಿ 'ಚೀನಾ' ಎಂದು ಕೆಂಪು ಬಣ್ಣದಲ್ಲಿ ಬರೆಯಲಾಗಿದೆ.
ಜಮ್ಮು-ಕಾಶ್ಮೀರದ ಲಡಾಖ್, ಹಿಮಾಚಲ ಪ್ರದೇಶದ ಸ್ಪಿತಿ ಮತ್ತು ಟಿಬೆಟ್ ಸೇರುವಲ್ಲಿನ ಸಮುದ್ರ ಮಟ್ಟಕ್ಕಿಂತ 22,420 ಅಡಿ ಎತ್ತರದಲ್ಲಿರುವ ತ್ರಿಕೂಟ ಪ್ರದೇಶ ಮೌಂಟ್ ಗಯಾ ಭಾರತೀಯ ಸೇನೆ ವಶದಲ್ಲಿದೆ. ಇಲ್ಲಿ ಎರಡು ದೇಶಗಳ ನಡುವೆ ಬ್ರಿಟೀಷರ ಕಾಲದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸಲಾಗಿತ್ತು.
ಝೂಲಂಕ್ ಲಾ ಕಣಿವೆಯುದ್ದಕ್ಕೂ ಇರುವ ಬಹುತೇಕ ಬಂಡೆ-ಕಲ್ಲುಗಳ ಮೇಲೆ ಕೆಂಪು ಬಣ್ಣದ ಗುರುತುಗಳಿದ್ದು, ಚೀನೀಯರು ಈ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಎಲ್ಲೆಡೆ 'ಚೀನಾ' ಎಂದು ಬರೆದಿರುವುದನ್ನು ಗಡಿರಕ್ಷಣಾ ಪಡೆಯು ಜುಲೈ 31ರಂದು ಪತ್ತೆ ಹಚ್ಚಿತ್ತು ಎಂದು ಮೂಲಗಳು ತಿಳಿಸಿವೆ.
ಇದು ಕಾರ್ಯಕಾರಿ ವಿಚಾರವಾಗಿರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲು ಸೇನೆಯ ವಕ್ತಾರರು ನಿರಾಕರಿಸಿದ್ದಾರೆ. ಸೇನೆಯ ಮೂವರು ಮುಖ್ಯಸ್ಥರು ಪ್ರಸಕ್ತ ಬೀಜಿಂಗ್ ಮತ್ತು ಲಾಸಾದಲ್ಲಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ವಿವಾದಕ್ಕೆ ಕಡಿಮೆ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.