ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಧ್ರ ಸಚಿವರಿಂದ ಪ್ರಮಾಣವಚನ; ಮುಖ್ಯಮಂತ್ರಿ 'ನಿಗೂಢ'
(Y S Rajasekhara Reddy | Andhra Pradesh | Rosaiah | Jaganmohan)
ಹೈದರಾಬಾದ್, ಭಾನುವಾರ, 6 ಸೆಪ್ಟೆಂಬರ್ 2009( 17:39 IST )
ವೈ.ಎಸ್. ರಾಜಶೇಖರ ರೆಡ್ಡಿ ದುರ್ಮರಣದ ನಂತರ ಮುಖ್ಯಮಂತ್ರಿ ಹೊಣೆ ಹೊತ್ತುಕೊಂಡಿರುವ ಕೆ. ರೋಸಯ್ಯ ಸೇರಿದಂತೆ ಆಂಧ್ರ ಪ್ರದೇಶ ಸರಕಾರದ 34 ಸಂಪುಟ ಸಚಿವರು ಭಾನುವಾರ ನೂತನ ಪ್ರಮಾಣ ವಚನ ಸ್ವೀಕರಿಸಿದರು.
ಹೈದರಾಬಾದ್‌ನಲ್ಲಿರುವ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯಪಾಲ ಎನ್.ಡಿ. ತಿವಾರಿ ಪ್ರಮಾಣವಚನ ಬೋಧಿಸಿದರು.
ಕಾನೂನು ತಜ್ಞರ ಸಲಹೆ ಪಡೆದ ನಂತರ ಸಚಿವರು ಹೊಸದಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸುವ ನಿರ್ಧಾರಕ್ಕೆ ಬರಲಾಗಿತ್ತು. ರಾಜಶೇಖರ ರೆಡ್ಡಿಯವರು ಹೆಲಿಕಾಫ್ಟರ್ ದುರಂತದಲ್ಲಿ ಸಾವನ್ನಪ್ಪಿದ ಕಾರಣ ಉಸ್ತುವಾರಿ ಮುಖ್ಯಮಂತ್ರಿಯಾಗಿ ರೋಸಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಾರು? ಸಚಿವರು ಪ್ರಮಾಣ ವಚನ ಸ್ವೀಕರಿಸಿದರೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಯಾರೆಂದು ಇನ್ನೂ ನಿರ್ಧರಿಸಲಾಗಿಲ್ಲ. ಬಹುತೇಕ ಶಾಸಕರು ರೆಡ್ಡಿ ಪುತ್ರ ಜಗನ್ಮೋಹನ್ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಗನ್ಮೋಹನ್ ಮುಖ್ಯಮಂತ್ರಿಯಾದರೆ ಅವರ ಅಡಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಲು ತಾವು ಸಿದ್ಧರಿಲ್ಲ ಎಂದು ಕೆಲವು ಸಚಿವರು ಈಗಾಗಲೇ ತಮ್ಮ ನಿರ್ಧಾರವನ್ನು ಆಪ್ತವಲಯದಲ್ಲಿ ತೋಡಿಕೊಂಡಿದ್ದಾರೆ.
ರಾಜಶೇಖರ ರೆಡ್ಡಿಯವರು ಕಾಲವಾದ ನಂತರ ಏಳು ದಿನಗಳ ಕಾಲ ಆಂಧ್ರ ಪ್ರದೇಶದಲ್ಲಿ ಶೋಕವನ್ನಾಚರಿಸಲಾಗುತ್ತಿದೆ. ಆ ನಂತರವಷ್ಟೇ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ಪಿ. ರಾಮಚಂದ್ರ ರೆಡ್ಡಿ, ಜೆ. ಕೃಷ್ಣ ರಾವ್ ಮತ್ತು ಸೈಯದ್ ಅಹಮದುಲ್ಲಾಹ್ ತಾವು ಜಗನ್ಮೋಹನ್ ಮುಖ್ಯಮಂತ್ರಿಯಾದರೆ ಮಾತ್ರ ಸಚಿವರಾಗಿ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂದು ಘೋಷಿಸಿದ್ದಾರೆ.
ಶಾಸಕರಾದ ಪ್ರಸಾದ್ ರಾಜು, ಎನ್. ಶೇಷು ರೆಡ್ಡಿ ಮತ್ತು ತೋಟ ನರಸಿಂಹ ಬಹಿರಂಗವಾಗಿಯೇ ಜಗನ್ಮೋಹನ್ ಮುಖ್ಯಮಂತ್ರಿಯಾಗಲು ಬೆಂಬಲ ಸೂಚಿಸಿದ್ದು, ಕಾಂಗ್ರೆಸ್ ವರಿಷ್ಠರತ್ತ ಬೃಹತ್ ಶಾಸಕರ ಗುಂಪು ಒತ್ತಡ ಹೇರುತ್ತಿದೆ.
ಕಾಂಗ್ರೆಸ್‌ನಲ್ಲಿ ಆಯ್ಕೆಯಾಗಿರುವ 154 ಶಾಸಕರ ಪೈಕಿ ಹೆಚ್ಚಿನವರು ಇದೇ ಮೊದಲ ಬಾರಿಗೆ ಆರಿಸಿ ಬಂದವರು. ಅವರೆಲ್ಲ ವೈಎಸ್‌ಆರ್ ಅವರ ಪ್ರಬಲ ಬೆಂಬಲಿಗರಾಗಿದ್ದು, ರೆಡ್ಡಿ ಮಗನೇ ಮುಖ್ಯಮಂತ್ರಿಯಾಗಬೇಕೆಂಬುದು ಅವರ ಬಯಕೆ.
ಈ ನಡುವೆ ಎನ್.ಟಿ. ರಾಮರಾವ್ ಪುತ್ರಿ ಡಿ. ಪುರಂದೇಶ್ವರಿ ಕೂಡ ಸೀಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಸಕ್ತ ಕೇಂದ್ರ ಸಚಿವೆಯಾಗಿರುವ ಅವರು ಹೈಕಮಾಂಡ್ ಬಯಸಿದಲ್ಲಿ ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ.
ಪುರುಂದೇಶ್ವರಿಯವರು ರಾಜಶೇಖರ ರೆಡ್ಡಿಯವರ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕಾರಣ ವೈಎಸ್‌ಆರ್ ಅಭಿಮಾನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಬಹುದು ಎಂಬ ಭೀತಿಯೂ ಕಾಂಗ್ರೆಸ್ ಹೈಕಮಾಂಡಿಗಿದೆ.
ರೋಸಯ್ಯ ಮುಖ್ಯಮಂತ್ರಿ ಪಟ್ಟದ ಆಸೆ ತನಗಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರ ಹೈಕಮಾಂಡ್ ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.