ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಿನ್ನಾ ಸಮರ್ಥಕರಿಗೆ ಬಿಜೆಪಿಯಲ್ಲಿ ಜಾಗವಿಲ್ಲ: ರಾಜನಾಥ್ ಸ್ಪಷ್ಟನೆ (BJP | Jaswant Singh | Rajnath Singh | Mohammad Ali Jinnah)
 
ಹಿರಿಯ ನಾಯಕ ಜಸ್ವಂತ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಪರ ವಕಾಲತ್ತು ನಡೆಸುವ ಪಕ್ಷದ ಯಾರೊಬ್ಬರನ್ನೂ ಕ್ಷಮಿಸಲಾಗುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ.

ಭೀಭತ್ಸ ಘಟನೆಗಳಿಗೆ ಸಾಕ್ಷಿಯಾಗಿದ್ದ ದೇಶದ ವಿಭಜನೆಗೆ ಕಾರಣರಾದ ಮೊಹಮ್ಮದ್ ಆಲಿ ಜಿನ್ನಾರನ್ನು ಶ್ಲಾಘಿಸುವ ಅಥವಾ ಹೊಗಳುವ ಕೆಲಸಕ್ಕೆ ನಮ್ಮ ಪಕ್ಷದ ಯಾರಾದರೂ ಮುಂದಾದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.
Rajnath singh
PTI


ಪಾಕಿಸ್ತಾನದ ಸ್ಥಾಪಕರ ಸಿದ್ಧಾಂತಗಳ ಜತೆ ಪಕ್ಷವು ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದೆ ಎಂದು ಹರ್ಯಾಣದಲ್ಲಿ ಕಾರ್ಯಕರ್ತರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಕೇಸರಿ ಪಕ್ಷದ ಮುಖಂಡ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಜಸ್ವಂತ್ ಸಿಂಗ್ 'ಜಿನ್ನಾ: ಭಾರತ, ಸ್ವಾತಂತ್ರ್ಯ, ವಿಭಜನೆ' ಪುಸ್ತಕವನ್ನು ಪ್ರಕಟಿಸಿದ ನಂತರ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಈ ವಿಚಾರವು ಬಿಜೆಪಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ದೇಶ ವಿಭಜನೆಗೆ ಜಿನ್ನಾ ಕಾರಣರಲ್ಲ ಎಂದಿದ್ದ ಜಸ್ವಂತ್‌ರವರು, ಪಟೇಟ್ ಮತ್ತು ನೆಹರೂ ಕಾರಣರು ಎಂಬುದನ್ನು ಬೊಟ್ಟು ಮಾಡಿ ತೋರಿಸಿದ್ದರು.

ಅಲ್ಲದೆ ನಂತರದ ದಿನಗಳಲ್ಲಿ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಮೇಲೆ ತರೇವಾರಿ ವಾಗ್ದಾಳಿ ನಡೆಸಿದ್ದ ಜಸ್ವಂತ್, ಸ್ವತಃ ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿ ಜಿನ್ನಾರನ್ನು ಹೊಗಳಿದಾಗ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದ ಬಿಜೆಪಿ ಈಗ ತನ್ನ ವಿರುದ್ಧ ಕತ್ತಿ ಝಳಪಿಸಿದೆ ಎಂದು ಟೀಕಿಸಿದ್ದರು. ಕಂದಹಾರ್, ಗುಜರಾತ್ ಹತ್ಯಾಕಾಂಡ ಮುಂತಾದ ವಿಚಾರಗಳಲ್ಲೂ ಅಡ್ವಾಣಿಯವರನ್ನು ಅವರು ಪೇಚಿಗೆ ಸಿಲುಕಿಸುವಂತಹ ಅನೇಕ ಹೇಳಿಕೆಗಳನ್ನು ನೀಡಿದ್ದರು.

ಇದೇ ಹಿನ್ನಲೆಯಲ್ಲಿ ಅವರ ಪುಸ್ತಕದ ಮೇಲೆ ಗುಜರಾತ್ ಬಿಜೆಪಿ ಸರಕಾರವು ನಿಷೇಧವನ್ನೂ ಹೇರಿತ್ತು. ಇದೀಗ ನಿಷೇಧವನ್ನು ಅಹಮದಾಬಾದ್ ಹೈಕೋರ್ಟ್ ರದ್ದು ಪಡಿಸಿದೆ.

ಅಕ್ಟೋಬರ್ 13ರಂದು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಮಾತನಾಡಿದ ರಾಜನಾಥ್, ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ ಸರಕಾರಗಳು ದರಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿವೆ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರತೀ ಬಾರಿಯೂ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವಿರುವಾಗ ಅಗತ್ಯ ವಸ್ತುಗಳ ಬೆಲೆಯೇರುತ್ತದೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ ಅವರು, 1998ರಿಂದ 2004ರ ನಡುವಿನ ಎನ್‌ಡಿಎ ಸರಕಾರದ ಅವಧಿಯಲ್ಲಿ ಪರಿಸ್ಥಿತಿ ಸಮಾಧಾನಕರವಾಗಿತ್ತು ಎಂದು ಬಿಜೆಪಿಯನ್ನು ಸಮರ್ಥಿಸಿಕೊಂಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ