ತನ್ನ ಮಗಳನ್ನೇ ವರ್ಷಗಳ ಕಾಲ ಸುಖಿಸಿ, ಆಕೆಯನ್ನು ಹಲವು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ದುರುಳ ತಂದೆಯೊಬ್ಬನನ್ನು ಒರಿಸ್ಸಾದ ಭದ್ರಕ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂಬುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಾಜ್‌ಗುರ್ಪುರ ಗ್ರಾಮದ ನಿವಾಸಿಯಾಗಿರುವ 58ರ ಹರೆಯ ವಿಷ್ಣುಮೋಹನ್ ಪಾಂಡಾ ಎಂಬಾತನೇ ಈ ನೀಚ ತಂದೆಯಾಗಿದ್ದಾನೆ. ವರ್ಷಗಳ ಕಾಲ ತನ್ನ ತಂದೆಯ ಅತ್ಯಾಚಾರದ ಬಲಿಪಶುವಾಗಿರುವ 32ರ ಹರೆಯದ ಬಲಿಪಶು ಪುತ್ರಿ ಗ್ರಾಮಸ್ಥರ ಸಹಾಯದೊಂದಿಗೆ ಕೊನೆಗೂ ಧೈರ್ಯತೋರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನಾಧಾರದಲ್ಲಿ ಆತನನ್ನು ಬಂಧಿಸಲಾಗಿದೆ ಎಂಬುದಾಗಿ ಗ್ರಾಮದ ಪೊಲೀಸ್ ಠಾಣಾಧಿಕಾರಿ ದಾಮೋದರ್ ಮೋಹಾಪಾತ್ರ ಹೇಳಿದ್ದಾರೆ.
ತಾನು ಒಂಬತ್ತನೆ ತರಗತಿಯಲ್ಲಿರುವಾಗಲೇ ತನ್ನ ತಂದೆ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದು, ವರ್ಷಗಳ ಕಾಲ ನಿರಂತರವಾಗಿ ಪೀಡಿಸಿರುವುದಾಗಿ ಆಕೆ ದೂರಿದ್ದಾಳೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದಲ್ಲಿ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಆತ ಹುಡುಗಿಯನ್ನು ಬೆದರಿಸಿದ್ದ. ಇದೀಗ ವಿವಾಹವಾಗಿ ಎರಡು ಮಕ್ಕಳನ್ನೂ ಹೊಂದಿರುವ ಆಕೆ ಕೊನೆಗೂ ಧೈರ್ಯಮಾಡಿ ತನ್ನ ಕಾಮುಕ ತಂದೆಯ ವಿರುದ್ಧ ದೂರು ನೀಡಿದ್ದಾಳೆ.
"ನನ್ನ ತಂದೆ ನನ್ನನ್ನೊಬ್ಬ ಬಡ ವ್ಯಕ್ತಿಗೆ ವಿವಾಹಮಾಡಿ ಕೊಟ್ಟಿದ್ದರೂ, ತಾನು ಮತ್ತು ತನ್ನ ಗಂಡ ತಂದೆಯ ಮನೆಯಲ್ಲೇ ತಂಗುವಂತೆ ಇಚ್ಚಿಸಿದ್ದ. ಇದರಿಂದ ತನ್ನನ್ನು ನಿರಂತರವಾಗಿ ಬಳಸಿಕೊಳ್ಳಬಹುದು ಎಂಬುದು ಆತನ ಇರಾದೆಯಾಗಿತ್ತು" ಎಂಬುದಾಗಿ ಬಲಿಪಶು ಮಗಳು ನೀಡಿರುವ ದೂರಿನಲ್ಲಿ ಹೇಳಿದ್ದಾಳೆ.
ಕಳೆದ ವರ್ಷಗಳಲ್ಲಿ ಹಲವಾರು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಆಕೆಯ ತಂದೆ ಒತ್ತಾಯಿಸಿದ್ದ ಎಂದು ಹೇಳಿರುವ ಮೊಹಾಪಾತ್ರ ತಂದೆಯನ್ನು ಬಂಧಿಸಿ ಈ ಕುರಿತು ಮುಂದಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.