ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕು ಎಂಬುದಾಗಿ ಹೇಳಿದ ಬಿಜೆಪಿ ಮಾತನ್ನು ಕಡೆಗಣಿಸಿ, ಸಮಿತಿಯ ಅಧ್ಯಕ್ಷರಾಗಿ ಮುಂದುವರಿದಿರುವ ಜಸ್ವಂತ್ ಸಿಂಗ್ ಅವರು ಸೋಮವಾರ ಸಮಿತಿಯ ಸಭೆ ಕರೆದಿದ್ದಾರೆ. ಸಭೆಗೆ ಬಿಜೆಪಿ ಸಂಸದರು ಹಾಜರಾಗಿಲ್ಲ. ಜಸ್ವಂತ್ ಸಿಂಗ್ ಅವರ ವಿವಾದಾಸ್ಪದ ಜಿನ್ನಾ ಪುಸ್ತಕದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಇತ್ತೀಚೆಗೆ ಉಚ್ಚಾಟನೆ ಮಾಡಲಾಗಿದೆ.
ವರದಿಗಳ ಪ್ರಕಾರ ಬಿಜೆಪಿಯ ಯಾವುದೇ ಸಂಸದರು ಸಭೆಯಲ್ಲಿ ಹಾಜರಾಗಿಲ್ಲ. ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಹಾಗೂ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಗೋಪಿನಾಥ್ ಮುಂಡೆ ಅವರು ಸಮಿತಿಯಲ್ಲಿರುವ ಬಿಜೆಪಿ ಸದಸ್ಯರಾಗಿದ್ದು, ಅವರಿಬ್ಬರೂ ಸಭೆಗೆ ಹಾಜರಾಗಿಲ್ಲ.
ಬಿಜೆಪಿಯಿಂದ ಉಚ್ಚಾಟಿಸಲಾಗಿರುವ ಹಿನ್ನೆಲೆಯಲ್ಲಿ ಪಿಎಸಿ ಅಧ್ಯಕ್ಷ ಸ್ಥಾನ ತೆರವುಗೊಳಿಸಬೇಕು ಎಂಬುದಾಗಿ ಬಿಜೆಪಿ ನೀಡಿರುವ ಸಲಹೆಗೆ ಸೊಪ್ಪುಹಾಕದ ಜಸ್ವಂತ್, ಲೋಕಸಭಾ ಸ್ಪೀಕರ್ ಅವರು ಮಾತ್ರ ಈ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.
"ನಾನು ರಾಜೀನಾಮೆ ನೀಡಲಾರೆ. ಈ ನಿರ್ಧಾರವನ್ನು ರಾಜಕೀಯ ಪಕ್ಷ ಒಂದು ಕೈಗೊಳ್ಳಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ಲೋಕಸಭಾ ಸ್ಪೀಕರ್ ಅವರು ಮಾತ್ರ ಕೈಗೊಳ್ಳಲು ಸಾಧ್ಯ" ಎಂದು ಹೇಳಿದ್ದಾರೆ.
ಜಸ್ವಂತ್ ಅವರನ್ನು ಉಚ್ಚಾಟನೆಗೊಳಿಸುವ ಕೆಲವೇ ದಿನಗಳ ಹಿಂದೆ ಪಿಎಸಿಗೆ ನೇಮಿಸಲಾಗಿತ್ತು. ಸಮಿತಿಗೆ ಸೂಚಿಸಲಾಗಿದ್ದ ಮೂವರು ಬಿಜೆಪಿ ಸಂಸದರಲ್ಲಿ ಹಿರಿಯರಾಗಿದ್ದ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.