ಇಂಧನ ತುಂಬಿಸಲೆಂದು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಇಳಿದಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಾಯಪಡೆಯ ಸಾರಿಗೆ ವಿಮಾನವು ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಬಹಿರಂಗಪಡಿಸದೆ ಸಾಗಿಸುತ್ತಿರುವುದನ್ನು ಕಂಡು ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ವಕ್ತಾರರೊಬ್ಬರು ಸೋಮವಾರ ತಿಳಿಸಿದ್ದಾರೆ.
ಯುಎಇ ವಾಯುಪಡೆಯ ಈ ವಿಮಾನ(ಸಿ130ಜೆ)ಯು ಅಬುದಭಿಯಿಂದ ಚೀನದ ಹನ್ಯಾಂಗ್‌ಗೆ ಸಾಗುತ್ತಿತ್ತು. ಇದು ಇಂಧನ ತುಂಬಿಸಲು ಇಲ್ಲಿನ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು.
"ಇದೊಂದು ವಾಡಿಕೆಯ ಕ್ರಮವಾಗಿದ್ದು, ಅವರು ಎಂಬೆಸಿ ಮುಖಾಂತರ ಅನುಮತಿ ಪಡೆದಿದ್ದರು. ಅಂತೆಯೆ ಇಂಧನ ತುಂಬಿಸಲು ಅಧಿಕೃತವಾಗಿ ಪ್ರಕ್ರಿಯೆಗಳನ್ನು ಪೂರೈಸಲಾಗಿತ್ತು. ಆದರೆ ಅಧಿಕೃತ ಫಾರಂನಲ್ಲಿ ವಿಮಾನವು ಸ್ಫೋಟಕವನ್ನು ಒಯ್ಯುತ್ತಿದೆಯೇ ಎಂಬ ಕಾಲಂ ಭರ್ತಿಮಾಡದೆ ಅದನ್ನು ಖಾಲಿಬಿಡಲಾಗಿದೆ" ಎಂಬುದಾಗಿ ವಕ್ತಾರ ಮಹೇಶ್ ಉಪಾಸನಿ ಹೇಳಿದ್ದಾರೆ.
ಕಸ್ಟಂ ಅಧಿಕಾರಿಗಳು ಜೌಪಚಾರಿಕ ತಪಾಸಣೆಗಾಗಿ ವಿಮಾನವನ್ನು ಪರೀಕ್ಷಿಸಿದಾದ ದೊಡ್ಡಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಕಂಡು ಬಂದಿದ್ದು, ಇದನ್ನು ಅಧಿಕೃತ ಫಾರಂನಲ್ಲಿ ನಮೂದಿಸಿರಲಿಲ್ಲ. ಇದನ್ನು ಕಂಡು ಅವರು ತಕ್ಷಣವೇ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಪೊಲೀಸರು ಹಾಗೂ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ಗೆ ತಿಳಿಸಿದರು.
ಬಳಿಕ ವಿಮಾನದ ಪೈಲಟ್ ಸೇರಿದಂತೆ ವಿಮಾನದ ಎಲ್ಲಾ ಒಂಭತ್ತು ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ವಿಮಾನವನ್ನು ವಿಮಾನನಿಲ್ದಾಣದಲ್ಲೇ ನಿಲ್ಲಿಸಲಾಗಿದೆ. ಈ ವಿಚಾರವನ್ನು ಉಭಯ ರಾಯಭಾರ ಕಚೇರಿಗಳು ಪರಿಹರಿಸಿಕೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.