ಕಳೆದ ನವೆಂಬರ್‌ನಲ್ಲಿ ಮುಂಬೈ ದಾಳಿ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ಗೆ ಬಾಸ್ಮತಿ ಅಕ್ಕಿಯ ಅನ್ನ ಬೇಕಂತೆ. ಈ ಹಿಂದೆ ಆತ ತನಗೆ ಮಟನ್ ಬಿರಿಯಾಣಿ ಬೇಕು ಎಂಬ ಬೇಡಿಕೆ ಇಟ್ಟಿದ್ದ.
ಕಸಬ್ ಮಸಾಲೆಯುಕ್ತ ಪದಾರ್ಥಗಳು ಹಾಗೂ ಬಾಸ್ಮತಿ ಅಕ್ಕಿಯ ಅನ್ನವನ್ನು ನೀಡಬೇಕು ಎಂದು ಕೇಳುತ್ತಿದ್ದು, ಆತ ಕೇಳಿದ ಖಾದ್ಯ ಸಿಕ್ಕಿಲ್ಲ ಎಂದಾದರೆ, ಕೋಪಗೊಂಡು ಜೈಲಿನ ಸಿಬ್ಬಂದಿಯನ್ನು ಬಯ್ತಾನೆ ಎನ್ನಲಾಗಿದೆ. ಕಸಬ್‌ನನ್ನು ಬಿಗಿ ಬಂದೋಬಸ್ತ್ ಇರುವ ಅರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ.
"ಕಳೆದ ವಾರ ಆತ ಬಾಸ್ಮತಿ ಅನ್ನ ಕೇಳಿದ. ಇದಕ್ಕೂ ಹಿಂದೆ ಆತ ಮಟನ್ ಬಿರಿಯಾಣಿ ಕೇಳಿದ್ದ" ಎಂಬುದಾಗಿ ಜೈಲು ಅಧಿಕಾರಿ ರಾಜೇಂದ್ರ ಧಾಮ್ನೆ ಸೋಮವಾರ ತಿಳಿಸಿದ್ದಾರೆ. ಕಸಬ್‌ನ ಮನಸ್ಸು ಆಗೀಗ ಅತ್ತಿತ್ತ ತುಯ್ದಾಡುತ್ತಿತ್ತು ನಾವಿದನ್ನು ಖಂಡಿಸಿದ್ದೇವೆ" ಎಂದು ಅವರು ಹೇಳಿದ್ದಾರೆ. ಕಳೆದ ವಾರ ಆತ ಜೈಲಿನಲ್ಲಿ ತನ್ನ ಕೋಪಾಟೋಪಗಳನ್ನು ತೋರಿದ್ದು, ಆಹಾರ ತೆಗೆದುಕೊಳ್ಳಲು ನಿರಾಕರಿಸಿದ್ದ. ಇದಲ್ಲದೆ ಕೋರ್ಟ್‌ಗೆ ತೆರಳುವ ಸಮಯಕ್ಕೆ ಸರಿಯಾಗಿ ಸಿದ್ಧವಾಗಿರುವುದಿಲ್ಲ, ಅಲ್ಲದೆ ಅವನ ಬಳಿ ತೆರಳುವ ಸಿಬ್ಬಂದಿಗಳನ್ನು ದೂಷಿಸುತ್ತಾನೆ ಎಂದು ಅಧಿಕಾರಿ ದೂರಿದ್ದಾರೆ.
ಕಸಬ್ ಜೈಲಿನಲ್ಲಿ ದುರ್ವರ್ತನೆ ತೋರುತ್ತಾನೆ ಎಂಬುದಾಗಿ ಜೈಲಿನ ಅಧಿಕಾರಿಗಳು ಮುಂಬೈದಾಳಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲದಲ್ಲಿ ದೂರಿದ್ದಾರೆ. ಜೈಲು ಸಿಬ್ಬಂದಿಗಳೊಂದಿಗೆ ಸರಿಯಾಗಿ ವರ್ತಿಸುವಂತೆ ನ್ಯಾಯಾಧೀಶರು ಆತನಿಗೆ ತಾಕೀತು ಮಾಡಿದ್ದರು.
ಜೈಲಿನ ಕೈಪಿಡಿಯಲ್ಲಿ ಸೂಚಿಸಲಾಗಿರುವ ಪ್ರಕಾರ ಎಲ್ಲಾ ಕೈದಿಗಳಿಗೂ ಆಹಾರಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.