ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕಾಯ್ದೆಯಡಿ ದಾಖಲಾಗುವ ದೌರ್ಜನ್ಯ ಪ್ರಕರಣಗಳಲ್ಲಿ ಶೇ.30ಕ್ಕೂ ಕಡಿಮೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ವಿಚಾರ ತಿಳಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಮತ್ತು ಇಂತಹ ಪ್ರಕರಣಗಳನ್ನು ಆದ್ಯತೆಯ ಆಧಾರದಲ್ಲಿ ವಿಚಾರಣೆ ನಡೆಸಬೇಕು ಎಂಬುದಾಗಿ ಸಲಹೆ ಮಾಡಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳವರು ಹಾಗೂ ಹಿರಿಯರ ಮೇಲೆ ದೌರ್ಜನ್ಯದ ಸುದ್ದಿಗಳು ನಿರಂತರವಾಗಿ ಬರುತ್ತಿರುವುದು ಆತಂಕಕಾರಿಯಾಗಿದೆ. ಈ ಕಾಯ್ದೆಯ ನಿಬಂಧನೆಗಳನ್ನು ಜಾರಿಗೆ ತರುವಂತೆ ತಾನು ಇತ್ತೀಚೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಬರೆದಿದ್ದೆ ಎಂಬುದಾಗಿ" ಪ್ರಧಾನಿ ಹೇಳಿದ್ದಾರೆ.
"ಐಪಿಸಿಯ ಇತರ ಪ್ರಕರಣಗಳಲ್ಲಿ ಸರಾಸರಿ ಶೇ.42ರಷ್ಟು ಪ್ರಕರಣಗಳಲ್ಲಿ ಶಿಕ್ಷೆ ನೀಡಲ್ಪಟ್ಟರೆ ಇಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲ್ಪಡುತ್ತಿರುವುದು ಶೇ.30ಕ್ಕಿಂತಲೂ ಕಡಿಮೆ ಎಂಬುದು ಆಘಾತಕಾರಿಯಾಗಿದೆ. ರಾಜ್ಯಸರ್ಕಾರಗಳು ಈ ವಿಚಾರದತ್ತ ಗಮನ ಹರಿಸುವ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ. ಅವರು ರಾಜ್ಯಗಳ ಸಮಾಜಕಲ್ಯಾಣ ಸಚಿವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.