ಮುಂದಿನ ವರ್ಷದಿಂದ(2010-11)ರಿಂದ ಸಿಬಿಎಸ್ಇಯ ಹತ್ತನೆ ತರಗತಿ ಮಕ್ಕಳಿಗೆ ಪರೀಕ್ಷೆ ಬರೆಯುವ ತಲೆನೋವು ಇರುವುದಿಲ್ಲ. ಪರೀಕ್ಷೆ ಬರೆಯುವುದು ಅಥವಾ ಬಿಡುವುದು ಅವರ ಆಯ್ಕೆಗೆ ಬಿಟ್ಟ ವಿಚಾರವಾಗಿರುತ್ತದೆ. ಆದರೆ ಗ್ರೇಡಿಂಗ್ ಪದ್ಧತಿ ಮಾತ್ರ ಇದೇ ವರ್ಷದಿಂದ ಜಾರಿಗೆ ಬರಲಿದೆ ಎಂಬುದಾಗಿ ಸರ್ಕಾರ ಸೋಮವಾರ ಘೋಷಿಸಿದೆ.
2010ರ ಮಾರ್ಚ್ ತಿಂಗಳಲ್ಲಿ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದ್ದು, ಫಲಿತಾಂಶವನ್ನು ಗ್ರೇಡಿಂಗ್ ಪದ್ಧತಿ ಮೂಲಕ ಘೋಷಿಸಲಾಗುವುದು. 2011ರಿಂದ ಗ್ರೇಡಿಂಗ್ ಪದ್ಥತಿ ಮುಂದುವರಿಯಲಿದ್ದು ಮಂಡಳಿ ಪರೀಕ್ಷೆಗೆ ಹಾಜರಾಗುವುದು ಅಥವಾ ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟು ವಿಚಾರವಾಗಿದೆ.
"ಸಿಬಿಎಸ್ಇ ಪರೀಕ್ಷೆಗಳನ್ನು 2010-11ರಿಂದ ತೊಡೆದು ಹಾಕಲಾಗುವುದು ಮತ್ತು 2009-10(ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗ್ರೇಡಿಂಗ್ ಪದ್ಧತಿ ಜಾರಿಗೆ ಬರಲಿದೆ" ಎಂಬುದಾಗಿ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಮಂಡಳಿ ಪರೀಕ್ಷೆಯನ್ನು ತೊಡೆದು ಹಾಕಿದ ಬಳಿಕ, ವಿದ್ಯಾರ್ಥಿಗಳು ಇನ್ನೊಂದು ಶಾಲೆಗೆ ವರ್ಗಾವಣೆ ಬಯಸಿದಾಗ ಅಥವಾ ಪದವಿಪೂರ್ವ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಬೇಕಿದ್ದರೆ ಬೇಡಿಕೆಯ ಮೇಲೆ ಸಿಬಿಎಸ್ಇ ಮಂಡಳಿ ಪರೀಕ್ಷೆ ಬರೆಯಬಹುದಾಗಿದೆ" ಎಂಬುದಾಗಿ ಸಿಬಾಲ್ ಹೇಳಿದ್ದಾರೆ.
ಅದೇ ಶಾಲೆಯಲ್ಲಿ ಮುಂದುವರಿಯಲು ಇಚ್ಚಿಸುವ ವಿದ್ಯಾರ್ಥಿಗಳಿಗೂ ಸಹ ಬೇಡಿಕೆಯ ಮೇಲೆ ಪರೀಕ್ಷೆ ಬರೆಯುವ ಅವಕಾಶವಿದೆ. ತಾವು ಕಲಿಯುತ್ತಿರುವ ಶಾಲೆಯಲ್ಲೇ ಮುಂದುವರಿಯುವ ವಿದ್ಯಾರ್ಥಿಗಳು 2011ರಿಂದ ಮಂಡಳಿ ಪರೀಕ್ಷೆಯನ್ನು ಬರೆಯುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗ್ರೇಡಿಂಗ್ ಪದ್ಧತಿಯು "ನಿರಂತರ, ಸಮಗ್ರ ಹಾಗೂ ಮೌಲ್ಯಾಧಾರಿತವಾಗಿರುತ್ತದೆ ಎಂದು ಹೇಳಿರುವ ಸಿಬಾಲ್ ಇದು ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ ಎಂದು ನುಡಿದರು. ಗ್ರೇಡಿಂಗ್ 9 ಅಂಕಗಳನ್ನು ಹೊಂದಿದ್ದು, ಎ1(ವಿಶೇಷ) ರಿಂದ ಇ2(ಅತೃಪ್ತಿಕರ) ಗ್ರೇಡ್‌ಗಳು ಇರುತ್ತವೆ ಎಂದು ಅವರು ತಿಳಿಸಿದರು.