ಮುಂಬೈಯಲ್ಲಿನ ಭಾರೀ ಆಸ್ತಿಯ ಒಡೆತನ ಪಾಕಿಸ್ತಾನ ಸಂಸ್ಥಾಪಕರ ಮೊಮ್ಮಗ ನುಸ್ಲಿ ವಾಡಿಯಾರಿಗೆ ಸಿಗುವಂತೆ ಮಾಡಲು ಸಹಾಯ ಮಾಡುವ ಮೂಲಕ ಪಿತೂರಿ ನಡೆಸಿದ್ದಾರೆ ಎಂದು ಇತ್ತೀಚೆಗಷ್ಟೇ ಜಿನ್ನಾ ಪರ ನಿಲುವು ತಾಳಿದ್ದಕ್ಕಾಗಿ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಜಸ್ವಂತ್ ಸಿಂಗ್ ವಿರುದ್ಧ ಆರ್‌ಎಸ್‌ಎಸ್ ಮುಖವಾಣಿ 'ಪಾಂಚಜನ್ಯ' ಕಿಡಿ ಕಾರಿದೆ.
ತನ್ನ ಪುಸ್ತಕ ಬಿಡುಗಡೆ ಮಾಡುವ ಮೊದಲೇ ಸಹಾನುಭೂತಿ ಸೃಷ್ಟಿಸುವ ಸಲುವಾಗಿ ಮೊಹಮ್ಮದ್ ಆಲಿ ಜಿನ್ನಾರನ್ನು ಒಬ್ಬ ರಾಷ್ಟ್ರೀಯತಾವಾದಿ, ವಿಭಜನೆ ಬಯಸದವರು ಮತ್ತು ಅವರನ್ನು ಭಾರತದಲ್ಲಿ ಕೆಟ್ಟ ವ್ಯಕ್ತಿಯನ್ನಾಗಿ ಬಿಂಬಿಸಲಾಯಿತು ಎಂದು ಜಸ್ವಂತ್ ಸಿಂಗ್ ಹೇಳಿದ್ದರು ಎಂದು 'ಪಾಂಚಜನ್ಯ'ದ ಇತ್ತೀಚಿನ ಸಂಚಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತವಾದಿ ದೇವೇಂದ್ರ ಸ್ವರೂಪ್ ಆರೋಪಿಸಿದ್ದಾರೆ.
ಮುಂಬೈಯಲ್ಲಿನ 2,000 ಕೋಟಿ ರೂಪಾಯಿಗಳ ಆಸ್ತಿಯ ಒಡೆತನ ಪಡೆದುಕೊಳ್ಳಲು ಜಿನ್ನಾ ಮೊಮ್ಮಗ ನುಸ್ಲಿ ವಾಡಿಯಾರಿಗೆ ಸಹಾಯ ಮಾಡುವ ಉದ್ದೇಶ ಇದರ ಹಿಂದಿತ್ತು ಎಂದು ಲೇಖಕರು ತಿಳಿಸಿದ್ದಾರೆ.
ಜಿನ್ನಾರ ಮುಂಬೈಯಲ್ಲಿನ ಆಸ್ತಿ ವಿವಾದದ ಪರ ಅಥವಾ ವಿರೋಧದ ಬಗ್ಗೆ ನಾನೇನೂ ಹೇಳುವುದಿಲ್ಲ. ವಿಭಜನೆಯನ್ನು ವಿರೋಧಿಸಿದ ಭಾರತೀಯ ರಾಷ್ಟ್ರೀಯತಾವಾದಿ ಜಿನ್ನಾ ಕರೆಯುವ ಹೇಳುವ ಮೂಲಕ ವಿಚಾರಗಳನ್ನು ವಾಣಿಜ್ಯೀಕರಣಗೊಳಿಸುವ ಹಂಬಲ ವಾಡಿಯಾ ಕುಟುಂಬದಲ್ಲಿದೆ ಎಂಬುದು ಪ್ರಶ್ನೆ ಎಂದು ಸ್ವರೂಪ್ ತನ್ನ ಲೇಖನದಲ್ಲಿ ಬರೆದುಕೊಂಡಿದ್ದಾರೆ.
1999ರಿಂದ 2009ರವರೆಗೆ ಕಂದಹಾರ್ ಪ್ರಕರಣವನ್ನು ಟೀವಿ ವಾಹಿನಿಗಳಲ್ಲಿ ಸಮರ್ಥಿಸಿಕೊಂಡು ಬಂದಿದ್ದ ಜಸ್ವಂತ್ ಈಗ ಹೇಳಿಕೆ ಬದಲಾಯಿಸುತ್ತಿರುವುದಕ್ಕೆ ಕಿಡಿ ಕಾರಿರುವ ಪಾಂಚಜನ್ಯ, ಅವರು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸ್ವಾಭಿಮಾನಕ್ಕಿಂತ ತನ್ನ ವೈಯಕ್ತಿಕ ಹಿತ ರಕ್ಷಣೆಯ ಬಗ್ಗೆ ಎಷ್ಟು ಆಸಕ್ತರಾಗಿದ್ದಾರೆ ಎಂದು ತೋರಿಸುತ್ತಿದೆ ಎಂದಿದೆ.
ಅಲ್ಲದೆ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರವಿರುವಾಗ ಜಿನ್ನಾ ಆಸ್ತಿಯನ್ನು ವಾಡಿಯಾರಿಗೆ ಹಸ್ತಾಂತರಿಸಲು ಜಸ್ವಂತ್ ಸಿಂಗ್ ಪಿತೂರಿ ನಡೆಸಿದ್ದರು ಎಂದೂ ಸ್ವರೂಪ್ ಆರೋಪಿಸಿದ್ದಾರೆ.
ನಾನು ಸಹಾಯ ಮಾಡಿಲ್ಲ: ವಾಡಿಯಾ ಅದೇ ಹೊತ್ತಿಗೆ ತನ್ನ ಮೇಲೆ ಬಂದಿರುವ ಆರೋಪಗಳನ್ನು ಮೊಹಮ್ಮದ್ ಆಲಿ ಜಿನ್ನಾ ಮೊಮ್ಮಗ ನುಸ್ಲಿ ವಾಡಿಯಾ ತಳ್ಳಿ ಹಾಕಿದ್ದಾರೆ.
ಜಿನ್ನಾರನ್ನು ವೈಭವೀಕರಿಸಿ ಪುಸ್ತಕ ಬರೆಯಲು ಉದ್ಯಮಿ ವಾಡಿಯಾರವರು ಜಸ್ವಂತ್ ಸಿಂಗ್‌ರಿಗೆ ಧನ ಸಹಾಯ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಆದರೆ ಜಸ್ವಂತ್ ಉಚ್ಛಾಟನೆಯ ಬಗ್ಗೆ ವಾಡಿಯಾ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಇದರಿಂದ ನೋವುಂಟಾಗಿದೆ ಎಂದು ವಾಡಿಯಾ ತಿಳಿಸಿದ್ದಾರೆ.
ಇದು ಶುದ್ಧ ಮೂರ್ಖತನವಲ್ಲದೆ ಬೇರೇನೂ ಅಲ್ಲ. ನನ್ನ ತಾತ ಎಂದರೆ ಅವರು ಯಾವತ್ತೂ ನನಗೆ ತಾತ, ಅದು ಬದಲಾಗದು. ಅವರಿಗೆ ಜಸ್ವಂತ್ ಸಿಂಗ್ ಯಾವುದೇ ಪ್ರಮಾಣಪತ್ರ ನೀಡುವ ಅಗತ್ಯ ನನಗಿಲ್ಲ ಎಂದು ಖಾಸಗಿ ಚಾನೆಲ್ ಜತೆ ಮಾತನಾಡುತ್ತಾ ವಾಡಿಯಾ ತಿಳಿಸಿದ್ದಾರೆ.