ದೆಹಲಿ ಮಹಾನಗರ ಪಾಲಿಕೆ ಸೇರಿದಂತೆ ದೆಹಲಿಯ ಒಟ್ಟು ಐದು ಸ್ಥಳಗಳಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಕರೆ ನೀಡಲಾಗಿದೆ. ಈ ಹಿಂದೆ ಬಾಂಬ್ ಸ್ಫೋಟದ ಭೀಕರತೆಯನ್ನು ಅನುಭವಿಸಿರುವ ದೆಹಲಿ ಮಂದಿ ಇದರಿಂದಾಗಿ ಕಂಗಾಲಾಗಿದ್ದಾರೆ.
ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲೂ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಲಾಗಿದೆ. ಬೆದರಿಕೆ ಇರುವ ಎಲ್ಲಾ ಕಟ್ಟಡಗಳಿಂದಲೂ ಜನರನ್ನು ತೆರವು ಮಾಡಲಾಗಿದೆ. ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ರೋಗಿಗಳನ್ನೂ ಹೊರಕಳುಹಿಸಲಾಗಿದೆ.
ಬಾಂಬ್ ನಿಷ್ಕ್ರಿಯ ದಳದವರು ಒಡನೆಯೇ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಎಲ್ಲಿಯೂ ಏನೂ ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮೇಲ್ನೋಟಕ್ಕೆ ಇದೊಂದು ಹುಸಿಕರೆಯೆಂದು ಕಂಡು ಬಂದಿದ್ದರೂ ಎಲ್ಲೆಡೆ ತೀವ್ರ ಹುಡುಕಾಟ ಮುಂದುವರಿದಿದೆ.