2004ರಲ್ಲಿ ಸಂಭವಿಸಿರುವ ಭೀಕರ ಸುನಾಮಿ ವೇಳೆ ಸಂತ್ರಸ್ತರಾದವರ ಪರಿಹಾರಾರ್ಥ ಸಾರ್ವಜನಿಕರಿಂದ ಸಂಗ್ರಹಿಸಲಾದ ನಿಧಿಯನ್ನು ಗುಳುಂ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆಯೊಬ್ಬಾಕೆ ಸೇರಿದಂತೆ ಇಬ್ಬರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೂಲೀಸರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಸಿಎಸ್‌ಐನ (ಚರ್ಚ್ ಆಫ್ ಸೌತ್ ಇಂಡಿಯಾ) ಮಾಜಿ ಅಧಿಕಾರಿಯೂ ಒಬ್ಬರಾಗಿರುವುದು ಅಚ್ಚರಿ ಮೂಡಿಸಿದೆ. ಕಳೆದ ಐದು ವರ್ಷಗಳ ಹಿಂದೆ ಇಲ್ಲಿ ಸಂಭವಿಸಿದ್ದ ಸುನಾಮಿಯ ಸಂತ್ರಸ್ತರಿಗಾಗಿ ಅಮೆರಿಕ ಮೂಲದ ಎಪಿಸ್ಕೋಪಲ್ ರಿಲೀಫ್ ಅಂಡ್ ಡೆವಲಪ್‌ಮೆಂಟ್ ಎಂಬ ಸರ್ಕಾರೇತರ ಸಂಸ್ಥೆ ಸಿಎಸ್‌ಐ ಮೂಲಕ 17 ಕೋಟಿ ರೂಪಾಯಿಗಳ ನೆರವು ನೀಡಿತ್ತು.
ಅದರಂತೆ ಸಿಎಸ್‌ಐ ಸಂತ್ರಸ್ತರಿಗೆ ಪರಿಹಾರವಾಗಿ ವಿತರಿಸುವ ಜತೆಗೆ ಪುನರ್ವಸತಿ ಕಾಮಗಾರಿಗಳನ್ನು ಮಾಡಬೇಕಿತ್ತು. ಆದರೆ ಸಿಎಸ್‌ಐ ನಲ್ಲಿ ಆಗ ಪ್ರಧಾನ ಕಾರ್ಯದರ್ಶಿಯಾಗಿದ್ದ ಪೌಲಿನ್, ತಮ್ಮ ಪತಿ ಸತ್ಯಮೂರ್ತಿ, ಪುತ್ರಿ ಬೆನೆಡಿಕ್ಟ ಹಾಗೂ ಮತ್ತಿಬ್ಬರೊಂದಿಗೆ ಸೇರಿ ಅದರಲ್ಲಿ 7.5 ಕೋಟಿ ರೂಪಾಯಿಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ಆಸ್ತಿಪಾಸ್ತಿ, ಐಷಾರಾಮಿ ವಾಹನಗಳ ಖರೀದಿ ಜತೆಗೆ ತಮ್ಮ ವೇತನವಾಗಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಸುನಿಲ್ ಮತ್ತು ವೈದ್ಯೆ ಬೆನೆಡಿಕ್ಟ ಅವರನ್ನು ಬಂಧಿಸಲಾಗಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆದಿದೆ.