ವಿದ್ಯುತ್ ಉಪಕರಣದಲ್ಲಿ ತನ್ನ ಕೂದಲೊಣಗಿಸುತ್ತಿರುವ ವೇಳೆಗೆ ಸಂಭವಿಸಿದ ವಿದ್ಯುತ್ ಸ್ಪರ್ಷದಿಂದಾಗಿ ಪಾಕಿಸ್ತಾನದ ಐಎಸ್ಐ ಸ್ಟೇಶನ್ ಮುಖ್ಯಸ್ಥ ಎಂ.ಕೆ. ಆಫ್ರಿದಿ ಅವರು ದೆಹಲಿಯ ತಮ್ಮ ವಸಂತ ವಿಹಾರ ನಿವಾಸದಲ್ಲಿ ಸಾವನ್ನಪ್ಪಿರುವ ದುರ್ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಉನ್ನದಮಟ್ಟದ ಅಧಿಕಾರಿಗಳ ಹಸ್ತಕ್ಷೇಪದ ಬಳಿಕ ಅವರ ಮೃತದೇಹವನ್ನು ವಾಘಾ ಗಡಿಮೂಲಕ ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ. ಕೌನ್ಸಿಲರ್ ಹುದ್ದೆಯಲ್ಲಿದ್ದ ಅಫ್ರಿದಿ ಅವರು ಸಾಯಂಕಾಲ ಸ್ನಾನದ ಬಳಿಕ ಕೂದಲು ಒಣಗಿಸುತ್ತಿರುವ ವೇಳೆಗೆ ಸಂಭವಿಸಿದ ವಿದ್ಯುತ್ ಸ್ಪರ್ಷದಿಂದ ಸಾವನ್ನಪ್ಪಿದ್ದು ಇದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದಾಗಿ ಪಾಕಿಸ್ತಾನ ಹೈ ಕಮಿಷನ್ ಸ್ಥಳೀಯ ಪೊಲೀಸರಿಗೆ ತಿಳಿಸಿರುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.
ರಾಜತಾಂತ್ರಿಕ ಮಧ್ಯಪ್ರವೇಶದಿಂದಾಗಿ ಪಾಕಿಸ್ತಾನ ಹೈಕಮಿಷನ್ ಮೃತದೇಹವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅನುಮತಿ ನೀಡಿದೆ. ನಸುಕಿಗೂ ಮುಂಚಿನ 3 ಗಂಟೆ ವೇಳೆಗೆ ಅವರ ಮೃತದೇಹವನ್ನು ರಸ್ತೆ ಮೂಲಕ ಒಯ್ಯಲಾಗಿದ್ದು, ಮುಂಜಾನೆ ಎಂಟು ಗಂಟೆ ವೇಳೆಗೆ ವಾಘ ಗಡಿಯನ್ನು ದಾಟಿದೆ.