ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮಂಗಳವಾರ ನಡೆಯಲಿದ್ದು, 35 ಜಿಲ್ಲೆಗಳ 288 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,500 ಅಭ್ಯರ್ಥಿಗಳು ಹಣಾಹಣಿ ನಡೆಸಲಿದ್ದಾರೆ.
ಚುನಾವಣಾ ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳಲ್ಲಿ ಕನಿಷ್ಠ 600 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದರೆ 500 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ರಾಷ್ಟ್ರೀಯ ಚುನಾವಣಾ ಕಾವಲು ಸಮಿತಿ ನಡೆಸಿರುವ ಸಮೀಕ್ಷೆಯ ಅನುಸಾರ ಈ ಅಂಕಿ ಅಂಶಗಳು ದೊರೆತಿವೆ. ಸುಮಾರು 1200 ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಈ ಸಮೀಕ್ಷೆ ನಡೆಸಲಾಗಿದೆ.
ಈ ಪಟ್ಟಿಯಲ್ಲಿ ಶಿವಸೇನೆ ಅಗ್ರಸ್ಥಾನ ಪಡೆದಿದೆ. ಶಿವಸೇನೆಯ 153 ಅಭ್ಯರ್ಥಿಗಳಲ್ಲಿ 98 ಮಂದಿ, ಬಿಜೆಪಿಯ 114 ಅಭ್ಯರ್ಥಿಗಳಲ್ಲಿ 66, ಎಂಎನ್‌ಎಸ್ ಪಕ್ಷದ 114 ಅಭ್ಯರ್ಥಿ ಗಳಲ್ಲಿ 81 ಜನ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ. 461 ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದು ಇವರೆಲ್ಲಾ ಕೋಟ್ಯಧಿಪತಿಗಳಾಗಿದ್ದಾರೆ. ವಿಶೇಷವೆಂದರೆ ಎನ್‌ಸಿಪಿಯ 112 ಅಭ್ಯರ್ಥಿಗಳಲ್ಲಿ 83 ಜನರು ಕೋಟ್ಯಧಿಪತಿಗಳು.
ಕಾಂಗ್ರೆಸ್‌ನ 164 ಅಭ್ಯರ್ಥಿಗಳಲ್ಲಿ 103 ಜನರು ಕೋಟ್ಯಧಿಪತಿಗಳು. ಬಿಜೆಪಿಯಲ್ಲಿ 59 ಅಭ್ಯರ್ಥಿಗಳು ಮಾತ್ರವೇ ಕೋಟ್ಯಧಿಪತಿಗಳಿದ್ದರೆ ಶಿವಸೇನೆಯಲ್ಲಿ 69 ಜನರಿದ್ದಾರೆ. ಎಂಎನ್‌ಎಸ್ ಮತ್ತು ಬಿಎಸ್‌ಪಿಯಲ್ಲಿ ಕ್ರಮವಾಗಿ 34 ಹಾಗೂ 17 ಜನ ಕೋಟ್ಯ ಧಿಪತಿಗಳಿದ್ದಾರೆ.
ಏತನ್ಮಧ್ಯೆ, 64 ಅಭ್ಯರ್ಥಿಗಳಿಗೆ ಆಸ್ತಿಯೇ ಇಲ್ಲವಂತೆ.
ಅಭ್ಯರ್ಥಿಗಳ ಆಸ್ತಿ ವಿವರ, ವಿದ್ಯಾಭ್ಯಾಸ ಇತರ ಹಿನ್ನೆಲೆಗಳನ್ನು ಅವರು ಸಲ್ಲಿಸಿರುವ ಪ್ರಮಾಣ ಪತ್ರದ ಅನುಸಾರ ಮತದಾರರಿಗೆ ಎಸ್‌ಎಂಎಸ್ ಮೂಲಕ ರಾಷ್ಟ್ರೀಯ ಚುನಾವಣಾ ಕಾವಲು ಸಮಿತಿ ಮಾಹಿತಿ ನೀಡುತ್ತಿದೆ.
ಮಹಾರಾಷ್ಟ್ರ, ಹರ್ಯಾಣ, ಅರುಣಾಚಲ ಪ್ರದೇಶಗಳಲ್ಲಿ ಮಂಗಳವಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ.