ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 3 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ: ಮತದಾನ ಆರಂಭ (Assembly Elections | Polling | Maharastra)
Feedback Print Bookmark and Share
 
ಮಹಾರಾಷ್ಟ್ರ, ಹರ್ಯಾಣ ಹಾಗೂ ಅರುಣಾಚಲಗಳ ಶಾಸನಸಭೆಗೆ ಮಂಗಳವಾರ ಚುನಾವಣೆ ನಡೆಯುತ್ತಿದ್ದು, ಮುಂಜಾನೆಯಿಂದ ಮತದಾನ ಆರಂಭವಾಗಿದೆ. ಲೋಕಸಭಾ ಚುನಾವಣೆಯ ಆರು ತಿಂಗಳ ಬಳಿಕ ಈ ಚುನಾವಣೆ ನಡೆಯುತ್ತಿದ್ದು, ಇದು ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾದ ಪರೀಕ್ಷೆ ಎಂದೇ ಪರಿಗಣಿಸಲಾಗಿದೆ.

ಹರ್ಯಾಣ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯೊಂದಿಗೆ ಆಡಳಿತ ಹಂಚಿಕೊಂಡಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೊಣೆಗಾರಿಕೆ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಶಿವಸೇನಾ-ಬಿಜೆಪಿ ಮೈತ್ರಿಕೂಟವು ಪ್ರಮುಖ ವಿರೋಧ ಪಕ್ಷವಾಗಿದ್ದು, ಅವುಗಳು ಮಾಡು ಇಲ್ಲವೇ ಮಡಿ ಎಂಬಂತೆ ಹೋರಾಟಕ್ಕೆ ಇಳಿದಿವೆ.

ಚುನಾವಣಾ ಆಯೋಗವು ವಿಸ್ತೃತ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ನಕ್ಸಲ್ ಪೀಡಿತ ಮಹಾರಾಷ್ಟ್ರದಲ್ಲಿ ಶಾಂತಿಯುತ ಚುನಾವಣೆಗಾಗಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರುಗಳು ಮೂರೂ ರಾಜ್ಯಗಳಲ್ಲೂ ಪ್ರವಾಸ ಮಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ. ಅಂತೆಯೇ ಬಿಜೆಪಿಯ ಆಡ್ವಾಣಿ, ರಾಜ್‌ನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ಸೇರಿದಂತೆ ಇತರ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.

ಮಹಾರಾಷ್ಟ್ರದ 288 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 7.58 ಕೋಟಿ ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ. 90 ಸ್ಥಾನ ಸಾಮರ್ಥ್ಯದ ಹರ್ಯಾಣ ವಿಧಾನ ಸಭಾ ಚುನಾವಣೆಯಲ್ಲಿ 1.31 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದರೆ, ಅರುಣಾಚಲದಲ್ಲಿ 7.50 ಲಕ್ಷ ಮತದಾರರು 60 ಪ್ರತಿನಿಧಿಗಳ ಆಯ್ಕೆ ಮಾಡಲಿದ್ದಾರೆ. ಅಕ್ಟೋಬರ್ 22ರಂದು ಮತಎಣಿಕೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ