ಕಟ್ಟಡದ ಮಾಲೀಕ ತನಗೆ ಅನುಭವ ಇಲ್ಲದ ವ್ಯವಹಾರ ನಡೆಸಲು ಮುಂದಾದರೂ ಆತನಿಗೆ ಸ್ಥಳ ಬಿಟ್ಟುಕೊಡುವುದಿಲ್ಲ ಎಂದು ಬಾಡಿಗೆದಾರ ಹೇಳುವಂತಿಲ್ಲ ಎಂಹುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಅಶೋಕ್ ಕುಮಾರ್ ಗಂಗೂಲಿ ಅವರಿದ್ದ ನ್ಯಾಯಪೀಠವು ಈ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪನ್ನು ತಳ್ಳಿಹಾಕಿದೆ.
ಅರ್ಜಿದಾರ ರಾಮ್ ಬಾಬು ಅಗರವಾಲ್ ತಮ್ಮ ಪುತ್ರ ಗಿರಿರಾಜ್‌ಗೆ ಚಪ್ಪಲಿ ಅಂಗಡಿ ಇಡುವುದಕ್ಕಾಗಿ ಬಾಡಿಗೆದಾರ ಜಯಕಿಶನ್ ದಾಸ್ ಸ್ಥಳ ಬಿಟ್ಟುಕೊಡಬೇಕೆಂದು ಕೇಳಿದ್ದರು. ಆದರೆ ಗಿರಿರಾಜ್‌ಗೆ ಬಟ್ಟೆ ವ್ಯಾಪಾರ ಗೊತ್ತೇ ಹೊರತು ಚಪ್ಪಲಿ ವ್ಯಾಪಾರ ಗೊತ್ತಿಲ್ಲ, ಇದೊಂದು ಸುಳ್ಳು ವಾದ ಎಂಬ ಬಾಡಿಗೆದಾರನ ನಿಲುವನ್ನು ಮಧ್ಯಪ್ರದೇಶ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಎತ್ತಿ ಹಿಡಿದಿದ್ದವು.
ಆದರೆ, ಇದೀಗ ಸುಪ್ರೀಂ ಕೋರ್ಟ್ ಸ್ಪಷ್ಟ ಮಾರ್ಗದರ್ಶನ ನಿಡಿದ್ದು, ವಿಚಾರಣಾ ನ್ಯಾಯಾಲಯವೇ ಈ ಮಾರ್ಗದರ್ಶನದಂತೆ ಸೂಕ್ತ ತೀರ್ಪು ನೀಡಬೇಕೆಂದು ಸೂಚಿಸಿದೆ.