ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದಕ್ಕೆ ಅವರು 'ಅಕ್ರಮವಾಗಿ ಪ್ರೀತಿಸಿದ' ತಪ್ಪಿಗಾಗಿ ಚಪ್ಪಲಿಯಿಂದ ನಿರಂತರ ಏಟು ನೀಡಿ ಬಳಿಕ ಕಾಲಿಗೆ ನಮಸ್ಕರಿಸಿ, ರಾಖಿ ಕಟ್ಟಿಸಿ ಈ ಜೋಡಿಯನ್ನು ಒಡಹುಟ್ಟಿದವರಂತಾಗಿಸಿದ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಂಭವಿಸಿದೆ.
ಈ ಘಟನೆಯು ಬುಧವಾರ ರಾತ್ರಿ ಬಿಂಜೋರ್ ಜಿಲ್ಲೆಯ ಕುಕ್ರಾ ಎಂಬ ಹಳ್ಳಿಯಲ್ಲಿ ಸಂಭವಿಸಿದೆ. ಕುಕ್ರಾ ಲಕ್ನೋದಿಂದ 350 ಕಿಲೋಮೀಟರ್ ದೂರದಲ್ಲಿದೆ.
ಬುಧವಾರ ಸಾಯಂಕಾಲ ಉದ್ಯಾನವನದಲ್ಲಿ ಜತೆಯಾಗಿ ಕುಳಿತಿದ್ದ ಪಿಂಟೋ ಶರ್ಮಾ(30) ಹಾಗೂ ಆತನ 28ರ ಹರೆಯದ ಪ್ರಿಯತಮೆಯನ್ನು ಪಂಚಾಯತ್ ಮುಂದೆ ಕರೆತಂದು ಬಳಿಕ ಅವರನ್ನು ಅಮಾನವೀಯವಾಗಿ ಶಿಕ್ಷಿಸಿ, ಬೇರ್ಪಡಿಸಲಾಗಿದೆ.
"ಮೊದಲಿಗೆ ಅವರಿಬ್ಬರಿಗೆ ಪರಸ್ಪರ ಕಪಾಳಕ್ಕೆ ಹೊಡೆದುಕೊಳ್ಳುವಂತೆ ಸೂಚಿಸಲಾಯಿತು. ಆದರೆ ಇದಕ್ಕೆ ಅವರು ನಿರಾಕರಿಸಿದಾಗ ಪಂಚಾಯತ್‌ನ ಕೆಲವು ಸದಸ್ಯರು ಹಾಗೂ ಗ್ರಾಮದವರು ಈ ಇಬ್ಬರಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಕಪಾಳಕ್ಕೆ ಬಾರಿಸಿದರು ಎಂದು ಸ್ಥಳೀಯರಾಗಿರುವ ಹರ್ಧಾರ್ ಕುಮಾರ್ ಹೇಳಿದ್ದಾರೆ.
ಬಳಿಕ ಹುಡುಗಿಯ ಕಾಲುಮುಟ್ಟಿ ನಮಸ್ಕರಿಸಿ ಆಕೆಯನ್ನು ಅಕ್ಕನೆಂದು ಸ್ವೀಕರಿಸುವಂತೆ ಶರ್ಮಾನನ್ನು ಒತ್ತಾಯಿಸಲಾಯಿತು. ಅಲ್ಲದೆ, ಹುಡುಗಿಯ ಕೈಯಿಂದ ಆತನ ಕೈಗೆ ರಾಖಿ ಕಟ್ಟಿಸಲಾಯಿತು. ಈ ಎಲ್ಲ ಶಿಕ್ಷೆಯೊಂದಿಗೆ ಈ ಇಬ್ಬರೂ ಬೇರೆಬೇರೆ ಗ್ರಾಮಕ್ಕೆ ತೆರಳುವಂತೆಯೂ ಪಂಚಾಯತ್ ಆದೇಶ ನೀಡಿತು ಎಂದು ಕುಮಾರ್ ತಿಳಿಸಿದ್ದಾರೆ.
ಸುದ್ದಿತಿಳಿದ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.
"ಯಾವುದೇ ಕಾರಣಕ್ಕೂ ಪಂಚಾಯತ್ ಮೂಢವರ್ತನೆ ತೋರಲು ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಕೆ. ಸಕ್ಸೆನಾ ತಿಳಿಸಿದ್ದಾರೆ.