ಚೆನ್ನೈಗೆ 90ಕಿಮೀ ದೂರದ ಪಾಲ್ಲಿಪಟ್‌ನಲ್ಲಿ ಪಟಾಕಿಗಳ ಗೋದಾಮಿನಲ್ಲಿ ಶುಕ್ರವಾರ ರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿ ಗೋದಾಮಿನಲ್ಲಿ ಕನಿಷ್ಠ 32 ಜನರು ಸಜೀವ ದಹಿಸಿಹೋಗಿದ್ದು, ಇನ್ನೂ 10 ಮಂದಿ ಗಾಯಗೊಂಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಮೃತರ ಕುಟುಂಬಗಳಿಗೆ ಕತ್ತಲೆ ಆವರಿಸುವಂತಾಗಿದ್ದು ದುರ್ದೈವ.
ಸುಮಾರು 32 ತೀರಾ ಸುಟ್ಟು ಕರಕಲಾದ ದೇಹಗಳನ್ನು ಗೋದಾಮಿನಿಂದ ಹೊರತೆಗೆಯಲಾಗಿದ್ದು, ಗೋದಾಮಿನಲ್ಲಿ ಸಗಟು ಮಾರಾಟಕ್ಕೆ ಪಟಾಕಿಗಳನ್ನು ಸಂಗ್ರಹಿಸಿಡಲಾಗಿದ್ದು, ಸಮೀಪದ ಅಕ್ಕಿಮಿಲ್‌ನಿಂದ ಕಾರ್ಯನಿರ್ವಸಲಾಗುತ್ತಿತ್ತೆಂದು ಪೊಲೀಸ್ ಮೂಲಗಳು ಹೇಳಿವೆ. ಸಂಪೂರ್ಣವಾಗಿ ಸುಟ್ಟುಹೋದ ಗೋದಾಮಿನಲ್ಲಿ ಸುಟ್ಟ ದೇಹಗಳ ಶೋಧ ನಡೆಸಲಾಗುತ್ತಿದೆಯೆಂದು ಮೂಲಗಳು ಹೇಳಿವೆ. ಮೃತರಲ್ಲಿ ಬಹುತೇಕ ಮಂದಿ ದುರ್ದೈವಿಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಸೇರಿದವರು. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಈ ಘಟನೆಯ ಬಳಿಕ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರೈಸ್ ಮಿಲ್ ಹಿಂಭಾಗದಲ್ಲಿ ಗೋದಾಮಿನ ಹೊರಗೆ ಪಟಾಕಿ ಅಂಗಡಿ ಕಾರ್ಯನಿರ್ವಹಿಸುತ್ತಿದ್ದು, ದಿವಾಳಿ ಹಬ್ಬಕ್ಕಾಗಿ ಅನೇಕ ಜನರು ಪಟಾಕಿ ಖರೀದಿಸುತ್ತಿದ್ದರು. ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿವೆ. ಪಾಲ್ಲಿಪಾಟ್ಟು ಪೊಲೀಸರು ಅಗ್ನಿ ಅನಾಹುತ ಕುರಿತು ತನಿಖೆ ನಡೆಸಿದ್ದಾರೆ.