ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಶನಿವಾರ ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರನ್ನು ಭೇಟಿ ಮಾಡಿ, ಆಂತರಿಕ ಭದ್ರತೆ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಕುರಿತು ಚರ್ಚಿಸಿದರು. ಮಾವೋವಾದಿಗಳಿಂದ ಹಿಂಸಾಚಾರ ಉಲ್ಭಣ ಮತ್ತು ಸರ್ಕಾರ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಹಸಿರು ನಿಶಾನೆ ನೀಡಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ.
ಸುಮಾರು ಅರ್ಧಗಂಟೆ ಕಾಲ ಉಭಯ ನಾಯಕರು ಮಾತನಾಡಿದ್ದು, ಈ ಸಂದರ್ಭದಲ್ಲಿ ದಿವಾಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೃಷಿ ಉತ್ಪಾದನೆ ಮತ್ತು ಆಹಾರ ಭದ್ರತೆ ಕುರಿತು ವಿವಿಧ ವಿಷಯಗಳನ್ನು ಕೂಡ ಅವರು ಚರ್ಚಿಸಿದರೆಂದು ರಾಷ್ಟ್ರಪತಿ ಭವನದ ವಕ್ತಾರ ಹೇಳಿದ್ದಾರೆ.
ಥಾಯ್ಲಿಂಡ್‌ನಲ್ಲಿ ಏಸಿಯನ್ ಭಾರತ ಶೃಂಗಸಭೆಯಲ್ಲಿ ಭಾಗವಹಿಸುವ ಬಗ್ಗೆ ಪ್ರಧಾನಿ ರಾಷ್ಟ್ರಪತಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಥಾಯ್ಲೆಂಡ್ ಭೇಟಿಯ ಸಂದರ್ಭದಲ್ಲಿ ಚೀನಾದ ಪ್ರಧಾನಮಂತ್ರಿ ವೆನ್ ಜಿಯಾಬೊ ಸೇರಿದಂತೆ ಕೆಲವು ವಿಶ್ವನಾಯಕರನ್ನು ಅವರು ಭೇಟಿಯಾಗಲಿದ್ದಾರೆ.