ಭಾರತದಲ್ಲಿ ಹಂದಿಜ್ವರವೆಂಬ ಖಾಯಿಲೆಯೊಂದು ಜನ-ಜೀವನವನ್ನು ತತ್ತರಿಸಿತ್ತು ಎಂಬುದನ್ನು ಬಹುತೇಕ ಮಂದಿ ಮರೆತೇ ಹೋದಂತಿದೆ. ರೀಮುಗಟ್ಟಲೆ ವರದಿ ಮಾಡುತ್ತಿದ್ದ ಮಾಧ್ಯಮಗಳೂ ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ನಿರ್ಲಕ್ಷ್ಯ ತೋರಿವೆ. ಕೇಳಿ-- ಭಾರತದಲ್ಲಿ ಇದುವರೆಗೆ ಹಂದಿಜ್ವರಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 408ಕ್ಕೇರಿದೆ!
ಭಾನುವಾರ ಕೇಂದ್ರ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಉತ್ತರಾಂಚಲದಲ್ಲಿ ಓರ್ವ ಸಾವನ್ನಪ್ಪುವುದರೊಂದಿಗೆ ಎಚ್1ಎನ್1ಗೆ ಭಾರತದಲ್ಲಿ ಸತ್ತವರ ಸಂಖ್ಯೆ 408.
ಕರ್ನಾಟಕಕ್ಕೆ 2ನೇ ಸ್ಥಾನ.. ಇದರಲ್ಲಿ 173 ಮಂದಿ ಸಾವನ್ನಪ್ಪಿದ ಮಹಾರಾಷ್ಟ್ರದ್ದು ಅಗ್ರ ಸ್ಥಾನ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 100ಕ್ಕೂ (ಮೂಲಗಳ ಪ್ರಕಾರ 112) ಹೆಚ್ಚು. ಮೂರನೇ ಮತ್ತು ನಾಲ್ಕನೇ ಸ್ಥಾನಗಳಲ್ಲಿ ಕ್ರಮವಾಗಿ ಆಂಧ್ರಪ್ರದೇಶ (ಮೂಲಗಳ ಪ್ರಕಾರ 42) ಮತ್ತು ಗುಜರಾತ್‌ಗಳು (ಮೂಲಗಳ ಪ್ರಕಾರ 36) ಕಾಣಿಸಿಕೊಂಡಿದ್ದು, ನಿಖರ ಅಂಕಿ-ಅಂಶಗಳು ಲಭ್ಯವಿಲ್ಲ.
ಅದೇ ಹೊತ್ತಿಗೆ ಎಚ್1ಎನ್1 ಸೋಂಕಿಗೊಳಗಾಗಿರುವವರ ಪಟ್ಟಿಯಲ್ಲೂ ಮಹಾರಾಷ್ಟ್ರ (3,468) ಇತರ ರಾಜ್ಯಗಳಿಗಿಂತ ಮುಂದಿದೆ. ಇಲ್ಲಿ ಎರಡನೇ ಸ್ಥಾನ ಪಡೆದಿರುವುದು (3,245) ರಾಷ್ಟ್ರ ರಾಜಧಾನಿ ದೆಹಲಿ. ಮೂರನೇ ಸ್ಥಾನದಲ್ಲಿ ತಮಿಳುನಾಡು ಕಾಣಿಸಿಕೊಂಡಿದ್ದರೆ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕವಿದೆ.
ಅಲ್ಲದೆ ದೀಪಾವಳಿಯಂದು ಶನಿವಾರ ದೇಶದಾದ್ಯಂತ 135 ಹೊಸ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆಯೂ ಸಚಿವಾಲಯ ಮಾಹಿತಿ ನೀಡಿದೆ. ಕೇರಳದಲ್ಲಿ 44, ಮಹಾರಾಷ್ಟ್ರದಲ್ಲಿ 24, ಕರ್ನಾಟಕದಲ್ಲಿ 21 ಹಾಗೂ ದೆಹಲಿಯಲ್ಲಿ 17 ನೂತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಭಾರತಕ್ಕೆ ನಾಲ್ಕನೇ ಸ್ಥಾನ.. ವಿಶ್ವದಲ್ಲಿ 2009ರಲ್ಲಿ ಕಂಡು ಬಂದಿರುವ ಎಚ್1ಎನ್1 ಸೋಂಕಿಗೆ ಇದುವರೆಗೆ 4,773 ಮಂದಿ ಬಲಿಯಾಗಿದ್ದಾರೆ. ಇಲ್ಲಿ ಕೂಡ ಭಾರತದ ಪಾಲು ಗರಿಷ್ಠವಾಗಿದ್ದು, ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
1,233 ಸಾವುಗಳಿಗೆ ಸಾಕ್ಷಿಯಾಗಿರುವ ಬ್ರೆಜಿಲ್ ಮೊದಲನೇ ಸ್ಥಾನದಲ್ಲಿದೆ. ಅಮೆರಿಕಾದಲ್ಲಿ 1,073 ಹಾಗೂ ಅರ್ಜೆಂಟೀನಾದಲ್ಲಿ 580 ಜನರ ಜೀವಗಳನ್ನು ಪಡೆಯುವ ಮೂಲಕ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ.