ಪಾಕಿಸ್ತಾನದ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಆ ದೇಶದಲ್ಲಿ ಭಯೋತ್ಪಾದನೆ ವ್ಯಾಪಕವಾಗಿ ಹರಡುತ್ತಿದೆ ಎಂದು ಹೇಳಿರುವ ಕೇಂದ್ರ ರಕ್ಷಣ ಸಚಿವ ಎ.ಕೆ.ಆಂಟನಿ, ಭಾರತವು ತಾಲಿಬಾನ್ ಉಗ್ರಗಾಮಿಗಳಿಂದ ಬರಬಹುದಾದ ಯಾವುದೇ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಸೇನಾ ದಿನಾಚರಣೆ ಪರೇಡ್ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆಂಟನಿ, ಭಾರತದಲ್ಲಿ ದಾಳಿಗಳನ್ನು ನಡೆಸುತ್ತೇವೆ ಎಂಬ ತಾಲಿಬಾನ್ ಬೆದರಿಕೆಯು ಚಿಂತೆಗೆ ಕಾರಣವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು. ನಮ್ಮ ಗಡಿ ಸಾರ್ವಭೌಮತೆ ಕಾಯುಕೊಳ್ಳಲು ಮತ್ತು ರಾಷ್ಟ್ರೀಯ ಭದ್ರತೆ ಕಾಪಾಡಿಕೊಳ್ಳಲು ಯಾವುದೇ ಸವಾಲುಗಳನ್ನು ಎದುರಿಸಲು ನಾವು ಯಾವತ್ತೂ ಸಜ್ಜಾಗಿದ್ದೇವೆ ಎಂದು ಅವರು ಉತ್ತರಿಸಿದರು.
ಕಳೆದೆರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಶಂಕಿತ ತಾಲಿಬಾನ್ ಉಗ್ರಗಾಮಿಗಳಿಂದ ಆರು ದೊಡ್ಡ ಭಯೋತ್ಪಾದನಾ ದಾಳಿಗಳು ನಡೆದಿದ್ದು, ಕಳೆದ ಶುಕ್ರವಾರ ನಾರ್ತ್ ವೆಸ್ಟ್ ಫ್ರಾಂಟಿಯರ್‌ನ ಪೇಶಾವರದಲ್ಲಿ 14 ಜನರು ಮೃತಪಟ್ಟಿದ್ದರು.
ಇರಾನಿನಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಪಾಕಿಸ್ತಾನದ ಕೈವಾಡದ ಕುರಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಆಂಟನಿ, ಗೊತ್ತಿಲ್ಲದಿರುವುದನ್ನೇನೂ ಹೇಳಲಾರೆ. ಆದರೆ ಭಯೋತ್ಪಾದನೆ ಪ್ರಸರಣೆಯಾಗುತ್ತಿದೆ. ಇದು ವಿಶ್ವಕ್ಕೇ ದೊಡ್ಡ ಪಿಡುಗು. ಭಯೋತ್ಪಾದನೆ ಇರುವುದು ನಿಜ. ಶಾಂತಿಪ್ರಿಯ ರಾಷ್ಟ್ರಗಳಿಗೆಲ್ಲಾ ಈ ಭಯೋತ್ಪಾದನೆ ಮಟ್ಟ ಹಾಕುವುದು ಬಲು ದೊಡ್ಡ ಸವಾಲಾಗಿ ಉಳಿದಿದೆ ಎಂದು ಉತ್ತರಿಸಿದರು.