ಗೋವಾ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಸನಾತನ ಸಂಸ್ಥೆಯ ಆರೋಪಿ ಸದಸ್ಯರಿಬ್ಬರಿಂದಾಗಿ ಸಂಸ್ಥೆಯ ಮೇಲೆ ಗೂಬೆ ಕೂರಿಸಿದ್ದು ಸರಿಯಲ್ಲ ಎಂದು ಸನಾತನ ಸಂಸ್ಥೆ ಸ್ಪಷ್ಟನೆ ನೀಡಿರುವಂತೆಯೇ, ಗೋವಾ ಸರಕಾರದ ಸಾರಿಗೆ ಸಚಿವರ ಪತ್ನಿಯೂ ಈ ಸಂಸ್ಥೆಯ ಸದಸ್ಯರೆಂಬುದು ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಗೃಹ ಸಚಿವ ರವಿ ನಾಯ್ಕ್, ಸನಾತನ ಸಂಸ್ಥೆಯೊಂದಿಗೆ ಗುರುತಿಸಿಕೊಂಡ ಪ್ರತಿಯೊಬ್ಬರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ. ಸಾರಿಗೆ ಸಚಿವ ಸುದಿನ್ ಅಲಿಯಾಸ್ ರಾಮಕೃಷ್ಣ ಧವಾಲಿಕರ್ ಅವರ ಪತ್ನಿ ಜ್ಯೋತಿ ಧವಲಿಕರ್ ಕೂಡ ಆ ಸಂಸ್ಥೆಯ ಸದಸ್ಯೆ ಎಂದು ನಮಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದರು.
ಸುದಿನ್ ದವಾಲಿಕರ್ ಅವರು ಮಹಾರಾಷ್ಟ್ರ ಗೋಮಾಂತಕ ಪಾರ್ಟಿ (ಎಂಜಿಪಿ) ಶಾಸಕರಾಗಿದ್ದು, ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಸಾರಿಗೆ ಸಚಿವರಾಗಿದ್ದಾರೆ. ಸುದಿನ್ ಅವರ ಸಹೋದರ್ ದೀಪಕ್ ಕೂಡ ಎಂಜಿಪಿ ಶಾಸಕರು.