ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಸಂಸದೀಯ ನಿಯೋಗದೊಂದಿಗೆ ಅಮೆರಿಕಾಕ್ಕೆ ತೆರಳಬೇಕಿದ್ದ ಬಿಜೆಪಿ ಸಂಸದ ಶಹನಾವಾಜ್ ಹುಸೇನ್‌ರಿಗೆ ಕ್ಲಪ್ತ ಸಮಯದಲ್ಲಿ ಅಮೆರಿಕಾ ವಿಸಾ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಮಧ್ಯ ಪ್ರವೇಶಿಸಿದ ಕಾರಣ ಹುಸೇನ್‌ಗೀಗ ವಿಸಾ ನೀಡಲಾಗಿದೆ.
ಅಕ್ಟೋಬರ್ 20ರಿಂದ 31ರವರೆಗೆ ಅಮೆರಿಕಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಇತರ ನಾಲ್ವರು ಸಂಸದರೊಂದಿಗೆ ಹುಸೇನ್ ಕೂಡ ಪಾಲ್ಗೊಳ್ಳಬೇಕಿತ್ತು. ಈ ಸಂಬಂಧ ವಿದೇಶಾಂಗ ಸಚಿವಾಲಯವು ವಿಸಾ ಅರ್ಜಿ ಸಲ್ಲಿಸಿತ್ತು.
ಇತರ ನಾಲ್ವರು ಸಂಸದರಿಗೆ ವಿಸಾಗಳನ್ನು ನೀಡಲಾಗಿದ್ದು, ಅವರು ಅಮೆರಿಕಾ ಪ್ರಯಾಣ ಬೆಳೆಸಿದ್ದಾರೆ. ದಾಖಲೆ ಪರಿಶೀಲನೆ ಹಿನ್ನಲೆಯಲ್ಲಿ ನಿಮ್ಮ ವಿಸಾ ವಿಳಂಬವಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹುಸೇನ್ ತಿಳಿಸಿದ್ದರು.
ನ್ಯೂಯಾರ್ಕ್‌ಗೆ ತೆರಳಿರುವ ಸಂಸದರ ನಿಯೋಗದಲ್ಲಿ ಕಾಂಗ್ರೆಸ್‌ನ ಗಿರಿಜಾ ವ್ಯಾಸ್ ಮತ್ತು ಸಂಜಯ್ ನಿರುಪಮ್, ಜೆಡಿಯುನ ಆಲಿ ಅನ್ವರ್ ಹಾಗೂ ಡಿಎಂಕೆಯ ಟಿ.ಕೆ.ಎಸ್. ಇಳಂಗೋವನ್ ವಿಸಾ ಪಡೆದಿದ್ದು, ಸೋಮವಾರ ಪ್ರಯಾಣ ಬೆಳೆಸಿದ್ದಾರೆ.
ಸಾಮಾನ್ಯ ಉಪನಾಮ 'ಹುಸೇನ್' ಎಂಬ ಕಾರಣಕ್ಕಾಗಿ ವಿಸಾ ತಡವಾಗುತ್ತಿದೆ. ಅಮೆರಿಕಾ ನಿಯಮಾವಳಿಗಳ ಪ್ರಕಾರ ಈ ಕುರಿತು ಪರಿಶೀಲನೆ ನಡೆಸಲು ಹೆಚ್ಚಿನ ಸಮಯ ತಗುಲುತ್ತದೆ ಎಂದು ನನಗೆ ಹೇಳಲಾಯಿತು ಎಂದು ಹುಸೇನ್ ಅಚ್ಚರಿ ವ್ಯಕ್ತಪಡಿಸಿದ್ದರು.
ನಾನು ಈ ಹಿಂದೆ ಸಂಸದ ಮತ್ತು ಸಚಿವನಾಗಿದ್ದಾಗ ಹಲವಾರು ಬಾರಿ ಅಮೆರಿಕಾಕ್ಕೆ ಭೇಟಿ ನೀಡಿದ್ದೇನೆ. ಈಗ ನನ್ನೊಬ್ಬನನ್ನು ಯಾಕೆ ಪ್ರತ್ಯೇಕಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ. ಅಮೆರಿಕಾ ಅಧ್ಯಕ್ಷರ ಹೆಸರಿನಲ್ಲೂ ಹುಸೇನ್ ಎಂಬ ಪದವಿದೆ. ಅಲ್ಲದೆ ಒಬಾಮಾರ ಸಂದೇಶವನ್ನು ಹೊಂದಿದ್ದ ಈದ್ ಶುಭಾಶಯವನ್ನು ಕೂಡ ಅಮೆರಿಕಾ ರಾಯಭಾರಿ ಕಳುಹಿಸಿದ್ದರು ಎಂದು ಹುಸೇನ್ ವಿವರಣೆ ನೀಡಿದ್ದರು.
ಮುಸ್ಲಿಮರ ವಿಚಾರದಲ್ಲಿ ಅಮೆರಿಕಾ ಹೆಚ್ಚಿನ ತನಿಖೆ ನಡೆಸುವ ತನ್ನ ಪರಿಪಾಠವನ್ನು ಇತ್ತೀಚೆಗೆ ತೀವ್ರಗೊಳಿಸುತ್ತಿದ್ದು, ಗಣ್ಯರಿಗೂ ವಿನಾಯಿತಿ ನೀಡುತ್ತಿಲ್ಲ. ಕೆಲ ಸಮಯದ ಹಿಂದಷ್ಟೇ ಬಾಲಿವುಡ್ ಬಾದ್‌ಶಾಹ್ ಶಾರೂಖ್ ಖಾನ್‌ರನ್ನು ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ದಿಗ್ಬಂಧನಕ್ಕೊಳಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅಡ್ವಾಣಿ ಮಧ್ಯಪ್ರವೇಶ.. ಈ ವಿಚಾರವನ್ನು ಗಮನಿಸಿದ ಪ್ರತಿ ಪಕ್ಷದ ನಾಯಕ ಎಲ್.ಕೆ. ಅಡ್ವಾಣಿಯವರು ಪ್ರಧಾನಿ ಮನಮೋಹನ್ ಸಿಂಗ್‌ರ ಗಮನ ಸೆಳೆದಿದ್ದರು. ಹುಸೇನ್‌ರಿಗೆ ವಿಸಾ ದೊರಕಿಸಲು ನೆರವಾಗುವಂತೆ ಅಡ್ವಾಣಿಯವರು ಮನವಿ ಮಾಡಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಹುಸೇನ್‌ಗೆ ಅಮೆರಿಕಾ ವಿಸಾ ದೊರೆತಿದೆ. ಅವರ ಪ್ರಯಾಣದ ವಿವರಗಳು ಲಭ್ಯವಾಗಿಲ್ಲ.