ವಧುವಿನ ವಯಸ್ಸು ಆತನ ಅಜ್ಜಿಯದು. ವರ 22ರ ತರುಣ. ಜಾನಕಿ ದೇವಿ ಎಂಬ 60ರ 'ತರುಣಿ'ಯನ್ನು ಮಹಾವೀರ ಕುಮಾರ ಎಂಬ ನವಯುವಕ ಮದುವೆಯಾದಾಗ, ಉತ್ತರ ಪ್ರದೇಶ ಸೀತಾಪುರ ಜಿಲ್ಲೆಯ ಸಕ್ರನ್ ಗ್ರಾಮಸ್ಥರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಸೋಮವಾರ ಸಂಜೆ ಈ ಸರಳ ವಿವಾಹ ಮಹೋತ್ಸವ ಜರುಗಿದೆ. ಹಾರ ಬದಲಾಯಿಸಿದ ಬಳಿಕ ಯುವಕನು ತನ್ನ ಹಸ್ತದ ಮೇಲೆ ಚಾಕುವಿನಿಂದ ಗೀರಿ, ಆ ರಕ್ತದಲ್ಲಿ ಅಜ್ಜಿಯ ಹಣೆಗೆ ಸಿಂಧೂರ ಇರಿಸಿದ.
ಸ್ಥಳೀಯರ ಪ್ರಕಾರ, ಜಾನಕಿದೇವಿಯ ಪತಿ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ಪತಿಯ ಸಾವಿನ ಬಳಿಕ ಆಕೆಯ ನಾಲ್ವರು ಪುತ್ರರು, ತಾಯಿಯನ್ನು ಗೋಳು ಹುಯ್ದುಕೊಳ್ಳತೊಡಗಿದರು. ಅವರ ಕಾಟ ತಾಳಲಾರದೆ ಈಕೆ ಗ್ರಾಮದಲ್ಲಿ ಕಾರ್ಮಿಕಳಾಗಿ ದುಡಿಯಬೇಕಾಗಿಬಂದಿತ್ತು.
ಕಟ್ಟಡ ಕೆಲಸ ಮಾಡುತ್ತಿದ್ದ ಸಂದರ್ಭ ಆಕೆಗೆ ಮಹಾವೀರ ಕುಮಾರನ ಪರಿಚಯವಾಗಿತ್ತು. ತನ್ನ ಸಮಸ್ಯೆಯನ್ನೆಲ್ಲಾ ಆತನ ಬಳಿ ಹೇಳಿಕೊಳ್ಳಲಾರಂಭಿಸಿದ್ದಳು. ಪರಿಚಯ ಸ್ನೇಹಕ್ಕೆ ತಿರುಗಿತು, ಅದು ಪ್ರೀತಿಯಾಗಿ ಮೊಳಕೆಯೊಡೆಯಿತು. ಜಾನಕಿದೇವಿಗೆ ಆರ್ಥಿಕ ಸಹಾಯವನ್ನೂ ಆತ ಮಾಡತೊಡಗಿದ.
ಸೋಮವಾರ ಆಕೆಯ ಮಕ್ಕಳು ತಾಯಿಯನ್ನು ಮನೆಯಿಂದ ಹೊರಹಾಕಿದಾಗ, ಅಲ್ಲಿಗೆ ಮಹಾವೀರ ಕುಮಾರ ಬಂದು, ತಾನು ಆಕೆಯನ್ನು ಪತ್ನಿಯಾಗಿ ಸ್ವೀಕರಿಸುವುದಾಗಿ ಬಹಿರಂಗವಾಗಿ ಘೋಷಿಸಿಬಿಟ್ಟ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಎರಡೂ ಕುಟುಂಬಗಳವರು ಈ ಮದುವೆಗೆ ವಿರೋಧಿಸಿದ್ದರು. ಹುಡುಗನ ತಂದೆ ತಾಯಿ ಇದಕ್ಕೆ ಒಪ್ಪಿರಲಿಲ್ಲವಾದರೆ, 'ಹುಡುಗಿ'ಯ ಮಕ್ಕಳು ಬಲವಾಗಿ ವಿರೋಧಿಸಿದ್ದರು! ಈ ಕಾರಣಕ್ಕೆ ಅವರು ಪೊಲೀಸರ ಸಹಾಯ ಯಾಚಿಸಿದ್ದರು. ಇದೀಗ ಅವರು ಸತಿ-ಪತಿಗಳಾಗಿದ್ದಾರೆ.