ತಿರುವನ್ನಮಲೈ, ಮಂಗಳವಾರ, 20 ಅಕ್ಟೋಬರ್ 2009( 15:22 IST )
ದೀಪಾವಳಿ ಸಂಭ್ರಮದಲ್ಲಿ ತೊಡಗಿದ್ದ ವೈದ್ಯರು ಮತ್ತು ನರ್ಸ್‌ಗಳ ಕರ್ತವ್ಯ ಲೋಪದ ಕಾರಣದಿಂದ ತಮಿಳುನಾಡಿನ ತಿರುವನ್ನಮಲೈ ಆಸ್ಪತ್ರೆಯಲ್ಲಿ ತಾಯಿ-ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದ್ದು, ರಾಜ್ಯ ಆರೋಗ್ಯ ಕಾರ್ಯದರ್ಶಿ ಘಟನೆಯ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
20ರ ಹರೆಯದ ಕನಿಮೋಳ್ ಮತ್ತು ಆಗಷ್ಟೇ ಹುಟ್ಟಿದ್ದ ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲು ವೈದ್ಯರು ಮತ್ತು ಶುಶ್ರೂಶಕಿಯರು ಅಲಭ್ಯರಾಗಿದ್ದ ಕಾರಣ ಅವರಿಬ್ಬರೂ ಮೃತರಾಗಿದ್ದರು.
ಕನಿಮೋಳ್ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯತೆಯೇ ಕಾರಣ ಎಂದು ಕುಟುಂಬ ಆರೋಪಿಸಿದ್ದರೆ, ಇದೊಂದು ಕ್ಲಿಷ್ಟಕರ ಪ್ರಕರಣವಾಗಿತ್ತು ಎಂದು ಆಸ್ಪತ್ರೆ ವಾದಿಸಿದೆ.
ಶನಿವಾರ ದೀಪಾವಳಿ ಹಬ್ಬವಾದ ಕಾರಣ ನರ್ಸ್‌ಗಳು ಅವಧಿಗೂ ಮುಂಚೆ ಮನೆಗೆ ಹೋಗಿದ್ದರು. ಆ ಹೊತ್ತಿನಲ್ಲಿ ನನ್ನ ಮಗಳಿಗೆ ಚಿಕಿತ್ಸೆ ನೀಡಲು ಯಾರೊಬ್ಬ ವೈದ್ಯರೂ ಸ್ಥಳದಲ್ಲಿರಲಿಲ್ಲ ಎಂದು ಕನಿಮೋಳ್ ತಾಯಿ ಟೀವಿ ವಾಹಿನಿಯೊಂದಕ್ಕೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ತಾಯಿ ಮತ್ತು ಮಗುವಿನ ಆರೋಗ್ಯ ದಿಢೀರನೆ ಸಂಕೀರ್ಣ ಪರಿಸ್ಥಿತಿ ತಲುಪಿತ್ತು. ಈ ಸಂದರ್ಭದಲ್ಲಿ ಡ್ಯೂಟಿ ಡಾಕ್ಟರನ್ನು ಕರೆಯಲಾಯಿತು. ಅವರು ಬರುವುದಕ್ಕೂ ಮೊದಲು ಇಬ್ಬರೂ ಸಾವನ್ನಪ್ಪಿದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಟ
ಇದೀಗ ತಿರುವನ್ನಮಲೈ ಆಸ್ಪತ್ರೆಯ ವಿರುದ್ಧ ಮೃತ ತಾಯಿ-ಮಗುವಿನ ಕುಟುಂಬಸ್ಥರು ಎಫ್‌ಐಆರ್ ದಾಖಲಿಸಿದ್ದಾರೆ.
ಮೇಲ್ನೋಟಕ್ಕೆ ಇದು ವೈದ್ಯಕೀಯ ನಿರ್ಲಕ್ಷ್ಯವೆಂದು ಕಂಡು ಬಂದಿರುವುದರಿಂದ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಇದೊಂದು ಗಂಭೀರ ಪ್ರಕರಣ. ತನಿಖೆಯ ವರದಿಯು ಎರಡು ದಿನಗಳೊಳಗಾಗಿ ಕೈ ಸೇರಲಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಮಿಳುನಾಡು ಆರೋಗ್ಯ ಕಾರ್ಯದರ್ಶಿ ವಿ.ಕೆ. ಶುಭರಾಜ್ ತಿಳಿಸಿದ್ದಾರೆ.