ಮಡ್ಗಾಂವ್ ಸ್ಫೋಟದಲ್ಲಿ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಕೈವಾಡವಿದೆ ಎಂದಿದ್ದ ಗೋವಾ ಪೊಲೀಸರು ಇದೀಗ ತಮ್ಮ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ. ತಾವು ಹಾಗೆ ಹೇಳಿಯೇ ಇಲ್ಲ ಮತ್ತು ಸನಾತನ ಸಂಸ್ಥೆ ಮಡ್ಗಾಂವ್ ಸ್ಫೋಟದಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಾರದ ಹಿಂದೆ ಗೋವಾದ ಮಡ್ಗಾಂವ್‌ನಲ್ಲಿ ನಡೆದಿದ್ದ ಸ್ಫೋಟದ ಹಿಂದೆ ಸನಾತನ ಸಂಸ್ಥೆಯಿರುವ ಶಂಕೆಯಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಗೋವಾ ಪೊಲೀಸರು ಈ ಹಿಂದೆ ತಿಳಿಸಿದ್ದರು.
ಸನಾತನ ಸಂಸ್ಥೆ ಮಡ್ಗಾಂವ್ ಸ್ಫೋಟದಲ್ಲಿ ಭಾಗಿಯಾಗಿದೆ ಎಂದು ನಾವು ಹೇಳಿಲ್ಲ. ಸ್ಫೋಟದ ಹಿಂದಿರುವ ಶಂಕಿತ ವ್ಯಕ್ತಿಗಳು ಸನಾತನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಮಾತ್ರ ಹೇಳಿದ್ದೆವು ಎಂದು ಗೋವಾ ಸಿಐಡಿ ಪೊಲೀಸ್ ಅಧೀಕ್ಷಕ ಆತ್ಮರಾಮ್ ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಸನಾತನ ಸಂಸ್ಥೆಯ ನೌಕರ ಮಾಲ್ಗೊಂಡ ಪಾಟೀಲ್ ಸ್ಫೋಟವನ್ನು ಯೋಜಿಸಿದ್ದ ಎಂದಿದ್ದ ಗೋವಾ ಸರಕಾರದ ಹೇಳಿಕೆಗೆ ಪೊಲೀಸರ ಹೇಳಿಕೆಯು ತದ್ವಿರುದ್ಧವಾಗಿದೆ.
ಮಾಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯ್ಕ್ ಎಂಬಿಬ್ಬರು ಈ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ. ಪಾಟೀಲ್ ಸನಾತನ ಸಂಸ್ಥೆಯ ಆಡಳಿತಾಧಿಕಾರಿ. ಸ್ಫೋಟದ ಹಿಂದಿನ ರೂವಾರಿ ಪಾಟೀಲ್. ಅವನೇ ಸ್ಕೂಟರ್‌ನಲ್ಲಿ ಬಾಂಬ್ ಇಟ್ಟಿದ್ದ. ಘಟನೆ ಹಿಂದೆ ಸನಾತನ ಸಂಸ್ಥೆಯ ನೇರ ಕೈವಾಡವಿದೆ ಎಂದು ಗೋವಾ ಗೃಹ ಸಚಿವ ರವಿ ನಾಯ್ಕ್ ಹೇಳಿಕೆ ನೀಡಿದ್ದರು.
ಆದರೆ ಇದನ್ನು ಸನಾತನ ಸಂಸ್ಥೆ ನಿರಾಕರಿಸಿದೆ. 'ನಮ್ಮ ಯಾವುದೇ ನೌಕರರು ಸ್ಫೋಟದಲ್ಲಿ ಭಾಗಿಯಾಗಿಲ್ಲ. ಪ್ರಕರಣದ ಕುರಿತು ನಮ್ಮ ವಿರುದ್ಧ ಸಂಪೂರ್ಣ ಪಿತೂರಿ ನಡೆಸಲಾಗಿದೆ. ನಾವು ಅದರಲ್ಲಿ ಪಾಲ್ಗೊಂಡಿದ್ದೇವೆ ಎನ್ನುವ ಆರೋಪ ಕೇವಲ ವದಂತಿ ಮಾತ್ರ. ನಮ್ಮ ಯಾವುದೇ ನೌಕರನನ್ನು ಬಂಧಿಸಲಾಗಿಲ್ಲ ಮತ್ತು ಆಕ್ಷೇಪಾರ್ಹ ವಸ್ತುಗಳು ಕೂಡ ಪತ್ತೆಯಾಗಿಲ್ಲ' ಎಂದು ಸಂಸ್ಥೆಯ ವಕ್ತಾರ ಅಭಯ್ ವರಾತಕ್ ತಿಳಿಸಿದ್ದಾರೆ.