ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್ ಸಾವು ಆಕಸ್ಮಿಕವಲ್ಲ; ಪೂರ್ವನಿಯೋಜಿತ ಹತ್ಯೆ? (YSR | Rajasekhar reddy | Hyderabad | Jaganmohan reddy)
Feedback Print Bookmark and Share
 
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಅಪಘಾತಕ್ಕೀಡಾದ 50 ದಿನಗಳ ನಂತರ ಇದೀಗ ಅವರು ಸಾವನ್ನಪ್ಪಿದ್ದು ಅಪಘಾತದಿಂದಲ್ಲ, ಇದರಲ್ಲಿ ಪಿತೂರಿ ಅಡಗಿದ್ದು ಪೂರ್ವನಿಯೋಜಿತ ಹತ್ಯೆಯೆಂದು ಹೇಳಲಾಗುತ್ತಿದೆ.

ವೈಎಸ್ಆರ್ ಪುತ್ರ ಜಗನ್ಮೋಹನ್ ರೆಡ್ಡಿ ಒಡೆತನದ 'ಸಾಕ್ಷಿ' ಎಂಬ ತೆಲುಗು ದಿನಪತ್ರಿಕೆ ಮತ್ತು ಅದೇ ಹೆಸರಿನ ಟೀವಿ ಚಾನೆಲ್‌ನಲ್ಲಿ ಈ ಸಂಬಂಧ ಸತತ ಮೂರು ದಿನಗಳಿಂದ ತನಿಖಾ ವರದಿಗಳು ಪ್ರಕಟವಾಗುತ್ತಿದೆ. ಇಲ್ಲಿ ಹಲವಾರು ಪ್ರಶ್ನೆಗಳನ್ನು ಪತ್ರಿಕೆ-ಚಾನೆಲ್ ಎತ್ತಿದ್ದು, ಆ ಮೂಲಕ ಮುಖ್ಯಮಂತ್ರಿ ಸಾವು ನೈಜವಲ್ಲ, ಅದೊಂದು ಕೊಲೆ ಎಂಬ ಶಂಕೆಗಳನ್ನು ಹುಟ್ಟು ಹಾಕಲಾಗುತ್ತಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯನವರನ್ನು ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಶ್ನಿಸಿದಾಗ ಅವರು, 'ಪ್ರಾಥಮಿಕ ಮಾಹಿತಿ ಪ್ರಕಾರ ಇದೊಂದು ಅಪಘಾತವೆಂದು ಹೇಳಲಾಗಿತ್ತು. ಆದರೆ ಈಗ ಇದರ ಹಿಂದೆ ಪಿತೂರಿಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೊಂದು ವೇಳೆ ಪಿತೂರಿ ಅಡಗಿದ್ದಲ್ಲಿ ಅದು ಬಹಿರಂಗವಾಗಬೇಕಿದೆ' ಎಂದಿದ್ದಾರೆ.

ಪಿತೂರಿ ನಡೆದದ್ದೇ ಆದಲ್ಲಿ ಅದು ಬಹಿರಂಗವಾಗಲಿದೆ. ಈ ಸಂಬಂಧ ಎರಡು ತನಿಖೆಗಳನ್ನು ನಡೆಯುತ್ತಿದ್ದು, ಬಹು ನಿರೀಕ್ಷಿತ ಫಲಿತಾಂಶಗಳು ಶೀಘ್ರದಲ್ಲೇ ಹೊರ ಬೀಳಲಿದೆ ಎಂದು ರೋಸಯ್ಯ ತಿಳಿಸಿದ್ದಾರೆ.

ಮತ್ತೊಂದು ಕಡೆ ವೈಎಸ್ಆರ್ ನಿಷ್ಠಾವಂತರಾದ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಮತ್ತು ಸಾರ್ವಜನಿಕ ಭದ್ರತಾ ವ್ಯವಹಾರಗಳ ಸಮಿತಿ ಅಧ್ಯಕ್ಷ ಕೆ.ವಿ.ಪಿ. ರಾಮಚಂದ್ರ ರಾವ್‌ರವರು ಮುಖ್ಯಮಂತ್ರಿಯವರನ್ನು ರಕ್ಷಿಸಲು ವಿಫಲರಾಗಿರುವುದಕ್ಕೆ ನೈತಿಕ ಹೊಣೆ ಹೊತ್ತು ಯಾಕೆ ರಾಜಿನಾಮೆ ನೀಡಿಲ್ಲ ಎಂದು ಜಗನ್ ಬೆಂಬಲಿಗರು ಪ್ರಶ್ನೆಯನ್ನೆತ್ತಿದ್ದಾರೆ.

'ಸಾಕ್ಷಿ' ಏನು ಹೇಳುತ್ತಿದೆ?
ಸಾಕ್ಷಿ ಟೀವಿ ಚಾನೆಲ್ ಮತ್ತು ಪತ್ರಿಕೆಯ ವರದಿಗಳ ಪ್ರಕಾರ ವೈಎಸ್ಆರ್ ಸಾವಿನ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದ್ದು, ಇದೊಂದು ಪೂರ್ವ ನಿಯೋಜಿತ ಕೊಲೆಯೆಂದು ಶಂಕೆ ವ್ಯಕ್ತಪಡಿಸಲಾಗಿದೆ.

ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಾ ಸಾಗುತ್ತಿದ್ದ ಹೆಲಿಕಾಫ್ಟರ್ ಹಲವು ದೊಡ್ಡ ದೊಡ್ಡ ಬೆಟ್ಟಗಳನ್ನು ದಾಟಿ ಹೋಗಿತ್ತು. ನಂತರ ದಿಢೀರನೆ 700 ಅಡಿಗಳಷ್ಟು ಕೆಳಗೆ ಬಂದು ಅಪಘಾತಕ್ಕೀಡಾಗಿತ್ತು. ವಾಸ್ತವದಲ್ಲಿ ಎರಡು ಬೆಟ್ಟಗಳ ನಡುವಿನ ಅಂತರವನ್ನು ಹೆಲಿಕಾಫ್ಟರ್ ದಾಟಲು ಕೇವಲ 4ರಿಂದ 5 ಸೆಕುಂಡು ಸಾಕಾಗುತ್ತದೆ. ಆದರೂ ಇದರ ನಡುವೆ 700 ಅಡಿಗಳಷ್ಟು ಕೆಳಗೆ ಹೆಲಿಕಾಫ್ಟರ್ ಬರಲು ಕಾರಣವೇನು ಎಂಬುದು ಸಾಕ್ಷಿ ಪ್ರಶ್ನೆ.

ಅಪಘಾತಕ್ಕೀಡಾದ ಹೆಲಿಕಾಫ್ಟರನ್ನು ಮುಖ್ಯಮಂತ್ರಿಯವರು ಬಳಸುತ್ತಿರಲಿಲ್ಲ. ಕಳೆದ ಒಂದು ವರ್ಷದಿಂದ ಅದು ಬಳಕೆಯಲ್ಲಿರಲಿಲ್ಲ. ಬಂದ ನಂತರವೂ ಕೆಲವು ದಿನಗಳ ಕಾಲ ಬೇರೆಯವರ ವಶದಲ್ಲಿತ್ತು. ಈ ಬೆಳವಣಿಗೆಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಯನ್ನೂ ಸಾಕ್ಷಿ ಎತ್ತಿದೆ.

ಇಷ್ಟೇ ಅಲ್ಲದೆ ಇನ್ನಿತರ ಹಲವು ಶಂಕೆಗಳನ್ನು ಪ್ರತಿದಿನ ವೈಎಸ್ಆರ್ ಪುತ್ರ ಜಗನ್ ಮಾಲಕತ್ವದ ಸಾಕ್ಷಿ ಪತ್ರಿಕೆ ಮತ್ತು ಟೀವಿ ಚಾನೆಲ್ ವರದಿ ಮಾಡುತ್ತಿದ್ದು, ಕಾಂಗ್ರೆಸ್ ವಲಯದಲ್ಲೀಗ ಗೊಂದಲವೇರ್ಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ