ದೇಶದಲ್ಲಿ ಸ್ವಾತಂತ್ರ್ಯಾ ನಂತರ ರೈಲು ಅಪಘಾತಗಳಿಗೆ ಸಾವಿರಾರು ಪ್ರಯಾಣಿಕರು ಬಲಿಯಾಗಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಇಂದು ಮಥುರಾ ಬಳಿ ನಡೆದ ರೈಲು ದುರಂತ. ಈ ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಹಿನ್ನಲೆಯಲ್ಲಿ 2002ರ ನಂತರ ನಡೆದ ರೈಲು ಅಪಘಾತಗಳ ಕೆಲವು ಪ್ರಮುಖ ಘಟನಾವಳಿಗಳನ್ನು ಇಲ್ಲಿ ನೀಡಲಾಗಿದೆ.
- ಜನವರಿ 5, 2002: ಸಿಕಂದರಾಬಾದ್ - ಮಾನ್ಮಾದ್ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲೊಂದಕ್ಕೆ ಮಹಾರಾಷ್ಟ್ರದ ಘತ್ನಾಂದುರ್ ರೈಲು ನಿಲ್ದಾಣದಲ್ಲಿ ಡಿಕ್ಕಿ ಹೊಡೆದ ಪರಿಣಾಮ 21 ಮಂದಿ ಸಾವು.
- ಮಾರ್ಚ್ 23, 2002: ಮಧ್ಯಪ್ರದೇಶದ ನರ್ಸಿಂಗಪುರ್ ಸಮೀಪ ಪಾಟ್ನಾ-ಮುಂಬೈ ಲೋಕಮಾನ್ಯ ತಿಲಕ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿ 7 ಸಾವು.
- ಮೇ 15, 2003: ಅಮೃತಸರಕ್ಕೆ ಹೋಗುತ್ತಿದ್ದ ಫ್ರಂಟಿಯರ್ ಮೇಲ್ ರೈಲಿನ ಮೂರು ಬೋಗಿಗಳಿಗೆ ಬೆಂಕಿ ತಗುಲಿ 38 ಮಂದಿ ಸಾವು.
- ಜೂನ್ 22, 2003: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಕಾರವಾರ-ಮುಂಬೈ ಸೆಂಟ್ರಲ್ ರಜಾದಿನ ವಿಶೇಷ ರೈಲು ಹಳಿ ತಪ್ಪಿದ ಪರಿಣಾಮ 53 ಮಂದಿ ಸಾವನ್ನಪ್ಪಿದ್ದರು.
- ಜುಲೈ 2, 2003: ವಾರಂಗಲ್ ಸಮೀಪ ಸೇತುವೆಯೊಂದರಿಂದ ರೈಲಿನ ಇಂಜಿನ್ ಮತ್ತು ಎರಡು ಬೋಗಿಗಳು ಕೆಳಕ್ಕುರುಳಿದ ಕಾರಣ 18 ಜನರ ಸಾವು.
- ಸೆಪ್ಟೆಂಬರ್ 9, 2002: ಹೌರಾ-ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನದಿಗೆ ಬಿದ್ದು 100 ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ 150 ಮಂದಿ ತೀವ್ರ ಗಾಯಗೊಂಡಿದ್ದರು.
- ಫೆಬ್ರವರಿ 27, 2004: ಗುವಾಹತಿಗೆ ಪ್ರಯಾಣಿಸುತ್ತಿದ್ದ ಕಂಚೆಂಜುಂಗಾ ಎಕ್ಸ್‌ಪ್ರೆಸ್ ರೈಲು ಪಶ್ಚಿಮ ಬಂಗಾಲದ ದಿನಾಜ್‌ಪುರ್ ಜಿಲ್ಲೆಯ ಲೆವೆಲ್ ಕ್ರಾಸಿಂಗ್ ಒಂದರಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 30 ಮಂದಿ ಸಾವಿಗೀಡಾಗಿದ್ದರು.
- ಡಿಸೆಂಬರ್ 15, 2004: ಪಂಜಾಬ್‌ನ ಜಲಂಧರ್ ಸಮೀಪ ಔರಂಗಾಬಾದ್‌ಗೆ ಪ್ರಯಾಣಿಸುತ್ತಿದ್ದ ಜಮ್ಮು ತಾವಿ ಎಕ್ಸ್‌ಪ್ರೆಸ್ ರೈಲು ಸ್ಥಳೀಯ ರೈಲೊಂದಕ್ಕೆ ಡಿಕ್ಕಿ ಹೊಡೆದು 11 ಮಹಿಳೆಯರ ಸಹಿತ 34 ಮಂದಿ ಬಲಿಯಾಗಿದ್ದರು.
- ಆಗಸ್ಟ್ 18, 2006: ಸಿಕಂದರಾಬಾದ್ ರೈಲ್ವೇ ನಿಲ್ದಾಣದ ಬಳಿ ಚೆನ್ನೈ-ಹೈದರಾಬಾದ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ತಗುಲಿ, ಇದರಲ್ಲಿ ಅಪಾರ ಹಾನಿ ಸಂಭವಿಸಿತ್ತು.
- ನವೆಂಬರ್ 9, 2006: ಪಶ್ಚಿಮ ಬಂಗಾಲದಲ್ಲಿ ನಡೆದ ರೈಲು ಅಪಘಾತದಲ್ಲಿ 40 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
- ಡಿಸೆಂಬರ್ 1, 2006: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ 150 ವರ್ಷ ಹಳೆಯದಾದ ಸೇತುವೆಯ ಭಾಗವೊಂದು ರೈಲಿನ ಮೇಲೆ ಕುಸಿದ ಪರಿಣಾಮ 35 ಮಂದಿ ಸಾವನ್ನಪ್ಪಿದ್ದರು.
- ಫೆಬ್ರವರಿ 13, 2009: ಒರಿಸ್ಸಾದ ಜಜ್ಪುರ್ ರೋಡ್ ಸಮೀಪ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ ಪರಿಣಾಮ ಹಲವರು ಗಾಯಗೊಂಡಿದ್ದರು.