ಕೋಪೆನ್‌ಹೇಗನ್‌ನಲ್ಲಿ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಯಾವುದೇ ಒಪ್ಪಂದಗಳಿಗೆ ಭಾರತವು ಮಣಿಯುವುದಿಲ್ಲ ಮತ್ತು ಯಾವುದನ್ನೂ ಮುಚ್ಚಿಡುವ ಪ್ರಮೇಯವೇ ಇಲ್ಲ ಎಂಬುದಾಗಿ ಸರ್ಕಾರ ಸೋಮವಾರ ಹೇಳಿದೆ. ಕೋಪೆನ್‌ಹೇಗನ್‌ನಲ್ಲಿ ಪರಿಸರ ಸಮ್ಮೇಳನ ನಡೆಯುತ್ತಿದ್ದು, ಇದರಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಸಂಸತ್ತಿನಲ್ಲಿ ಒಮ್ಮತ ಮೂಡಿಸಲು ಯತ್ನಿಸಿದ ಪರಿಸರ ಸಚಿವ ಜೈರಾಂ ರಮೇಶ್ ಅವರು "ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯುಂಟಾಗುವಂತಹ ಯಾವುದೇ ರಾಜಿಗೆ ಸರ್ಕಾರ ಸಿದ್ಧವಿಲ್ಲ" ಎಂದು ಹೇಳಿದರು. ಅವರು ಶೂನ್ಯ ಅವಧಿಯಲ್ಲಿ ಮಾತನಾಡುತ್ತಿದ್ದರು.
"ಯಾವುದೇ ಸಂದರ್ಭದಲ್ಲೂ ಅಂತಾರಾಷ್ಟ್ರೀಯ ಕಾನೂನು ರೀತ್ಯಾ ಎಮಿಶನ್ ಕಡಿತಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಾವು ಘೋಷಿಸಿರುವ ಕಡಿತಗಳು ಅಂತಾರಾಷ್ಟ್ರೀಯವಾಗಿ ಕಾನೂನು ಬದ್ಧತೆಯನ್ನು ಒಳಗೊಂಡಿಲ್ಲ" ಎಂದು ಅವರು ಹೇಳಿದರು.