ತುರ್ತು ಕ್ರಮಕ್ಕೆ ಆಗ್ರಹ: ಸಂಸತ್‌ನಲ್ಲಿ ಪ್ರತಿಧ್ವನಿಸಿದ 'ತೆಲಂಗಾಣ ಕಿಚ್ಚು'
ನಿರಶನ ಅಂತ್ಯಗೊಳಿಸುವಂತೆ ಆಡ್ವಾಣಿ ಮನವಿ...
ನವದೆಹಲಿ, ಬುಧವಾರ, 9 ಡಿಸೆಂಬರ್ 2009( 12:50 IST )
PTI
ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದ ಹಿನ್ನೆಲೆಯಲ್ಲಿ ಕಳೆದ 11ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಕೆ.ಚಂದ್ರಶೇಖರ್ ರಾವ್ ಅವರ ಆರೋಗ್ಯ ಕುರಿತು ಬುಧವಾರ ಸಂಸತ್ ಕಲಾಪದಲ್ಲಿ ಎಡಪಕ್ಷ, ಬಿಜೆಪಿ ಸಂಸದರು ಆತಂಕ ವ್ಯಕ್ತಪಡಿಸಿದರು.
ಕೆ.ಚಂದ್ರಶೇಖರ್ ರಾವ್ ಅವರು ಕೂಡಲೇ ನಿರಶನ ಅಂತ್ಯಗೊಳಿಸುವಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಮನವಿ ಮಾಡಿಕೊಂಡರು. ಅಲ್ಲದೆ, ಅವರ ಆರೋಗ್ಯ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಿಪಿಐ ಸಂಸದ ಗುರುದಾಸ್ ದಾಸ್‌ಗುಪ್ತಾ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಕೆಸಿಆರ್ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ವಿವಾದ ಕುರಿತಂತೆ ಕೂಡಲೇ ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದರು. ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ವಿವಾದ ಬಗೆ ಹರಿಕೆಗಾಗಿ ಮಧ್ಯಪ್ರವೇಶಿಸಬೇಕೆಂದರು.
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮತ್ತೊಂದೆಡೆ ಟಿಆರ್‌ಎಸ್ ವರಿಷ್ಠ ಕೆಸಿಆರ್ ಆರೋಗ್ಯ ಸ್ಥಿತಿಯೂ ತುಂಬಾ ಹದಗೆಟ್ಟಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಯು ಸಂಸದ ಶರದ್ ಯಾದವ್ ಒತ್ತಾಯಿಸಿದರು.