ಪ್ರಧಾನಿಯಾಗುವ ಸಾಮರ್ಥ್ಯ ಇದ್ದರೆ, ಮುಸ್ಲಿಂ ವ್ಯಕ್ತಿ ಆ ಸ್ಥಾನವನ್ನು ಎಂದು ಬೇಕಿದ್ದರೂ ಅಲಂಕರಿಸಬಹುದು ಎಂಬುದಾಗಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ, ಪ್ರಧಾನಿಯಾಗುವ ಹುದ್ದೆಗೆ ಅರ್ಹತೆ ಎಂದರೆ, ಆ ಸಮುದಾಯವು ಮೊದಲಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಬೆಂಬಲ ನೀಡಬೇಕು ಎಂಬುದಾಗಿ ಹೇಳಿದ್ದಾರೆ.
"ರಾಹುಲ್ ಗಾಂಧಿ ಈ ರಾಷ್ಟ್ರದ ಮಾಲಕನಲ್ಲ. ಮುಸ್ಲಿಮರು ಏಕ ನಾಗರಿಕ ಸಂಹಿತೆ, ಕುಟುಂಬ ಯೋಜನೆಯನ್ನು ಅನುಸರಿಸಬೇಕು, ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಬೆಂಬಲ ನೀಡಬೇಕು ಮತ್ತು ಅವರಿಗೆ ಒಂದೇ ಮಾತರಂ ಕಡ್ಡಾಯವಾಗುವಂತೆ ರಾಹುಲ್ ಖಚಿತ ಪಡಿಸಿಕೊಳ್ಳಬೇಕು. ಅದಾದಾಗ ಮಾತ್ರ ಮುಸ್ಲಿಂ ಒಬ್ಬ ಪ್ರಧಾನಿಯಾಗಲು ಸಾಧ್ಯ" ಎಂಬುದಾಗಿ ಠಾಕ್ರೆ ಹೇಳಿದ್ದಾರೆ. ಅವರು ತಮ್ಮ ಈ ಅಭಿಪ್ರಾಯವನ್ನು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯಲ್ಲಿ ವ್ಯಕ್ತಪಡಿಸಿದ್ದಾರೆ.
"ಮುಸ್ಲಿಮರನ್ನು ಓಲೈಸುತ್ತಿರುವ ಪರಿ ನೋಡಿದರೆ, ಭಾರತವು ಹೆಚ್ಚುಕಾಲ ಜಾತ್ಯತೀತವಾಗಿ ಉಳಿಯದು ಮತ್ತು ಇದೊಂದು ಅಘೋಷಿತ ಮುಸ್ಲಿಂ ರಾಷ್ಟ್ರವಾಗಲಿದೆ" ಎಂಬುದಾಗಿ ಠಾಕ್ರೆ ವ್ಯಂಗ್ಯವಾಡಿದ್ದಾರೆ.