ತೆಲಂಗಾಣ: ಟಿಆರ್ಎಸ್‌ಗೆ ಕಾಂಗ್ರೆಸ್ ಹಚ್ಚಿದ್ದು ಬೆಣ್ಣೆಯೇ?
ಹೈದರಾಬಾದ್, ಶುಕ್ರವಾರ, 11 ಡಿಸೆಂಬರ್ 2009( 18:00 IST )
ತೆಲಂಗಾಣ ರಾಷ್ಟ್ರೀಯ ಸಮಿತಿಯ ಕೆ. ಚಂದ್ರಶೇಖರ ರಾವ್ ಅವರ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುರಿಯಲು ಮಾತ್ರ ಪ್ರತ್ಯೇಕ ರಾಜ್ಯಕ್ಕೆ ಕೇಂದ್ರ ಸರಕಾರ ಅಸ್ತು ಎಂದಿದೆಯೇ? ಹಾಗೆಂದು ರಾಜಕೀಯ ವಲಯದಲ್ಲಿ ಹೊಸತೊಂದು ಸುದ್ದಿ ಹರಿದಾಡುತ್ತಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ ತೀವ್ರ ಸ್ವರೂಪದತ್ತ ಸಾಗುತ್ತಿದ್ದುದನ್ನು ಗಮನಿಸಿದ ಕೇಂದ್ರ ಸರಕಾರ, ಗೃಹ ಸಚಿವ ಪಿ. ಚಿದಂಬರಂ ಅವರ ಮೂಲಕ ಹೇಳಿಕೆಯೊಂದನ್ನು ಹೊರಡಿಸಿತ್ತಾದರೂ ಮುಂದಿನ ದಿನಗಳಲ್ಲಿ ಮಾತು ಬದಲಿಸುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ.
ದಿನದಿಂದ ದಿನಕ್ಕೆ ಕೃಶರಾಗುತ್ತಿದ್ದ ರಾವ್ ಆರೋಗ್ಯ ತೀರಾ ಹದಗೆಟ್ಟು ಪ್ರಾಣಕ್ಕೇನಾದರೂ ಅಪಾಯವಾದಲ್ಲಿ ಪರಿಸ್ಥಿತಿ ಹತೋಟಿ ತಪ್ಪಬಹುದು ಎಂಬುದನ್ನು ಮನಗಂಡ ಕೇಂದ್ರ, ಮತ್ತೊಂದು ಕಡೆಯಿಂದ ವಿದ್ಯಾರ್ಥಿಗಳ ರ‌್ಯಾಲಿಗಳ ಕುರಿತು ಕೂಡ ತಲೆ ಕೆಡಿಸಿಕೊಂಡಿತ್ತು. ಇವೆಲ್ಲವನ್ನೂ ಸದ್ಯದ ಮಟ್ಟಿಗೆ ಹತೋಟಿಗೆ ತರುವ ಪ್ರಯತ್ನವಾಗಿ ಹೇಳಿಕೆಯೊಂದನ್ನು ಹೊರಡಿಸಿತ್ತು ಎಂದು ರಾಜಕೀಯ ಪಡಸಾಲೆಯಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ 'ಯಾವುದೇ ಆತುರದ ಕ್ರಮಕ್ಕೆ ಮುಂದಾಗುವುದಿಲ್ಲ' ಎನ್ನುವ ಮೂಲಕ ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಹೆಚ್ಚಿನ ನಿರೀಕ್ಷೆಗಳು ಬೇಕಾಗಿಲ್ಲ ಎಂಬ ಪರೋಕ್ಷ ಹೇಳಿಕೆಯನ್ನು ನೀಡಲಾಗಿದೆಯೇ ಎಂಬ ಅನುಮಾನವೂ ಬೆಳೆಯುತ್ತಿದೆ.
ಶಾಸಕರು, ಸಂಸದರು ಪಕ್ಷಾತೀತವಾಗಿ ರಾಜೀನಾಮೆ ಸಲ್ಲಿಸಿರುವುದು, ತೆಲಂಗಾಣೇತರ ಪ್ರಾಂತ್ಯಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿರುವುದು ಇಂತಹ ವರದಿಗಳಿಗೆ ಪುಷ್ಠಿ ನೀಡಿರುವ ಬೆನ್ನಿಗೆ, ಚಿದಂಬರಂ ಹೇಳಿಕೆಯಲ್ಲಿ 'ವಿಶೇಷವಾದುದು ಏನೂ ಇಲ್ಲ' ಎಂದು ಸಂಸದ ಕೆ.ಎಸ್. ರಾವ್ ಹೇಳಿರುವುದು ಸಂಶಯಗಳನ್ನು ಮೂಡಿಸಿದೆ.
ಇಂದು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ ನಂತರ ತಣ್ಣಗಾಗಿದ್ದ ಸಂಸದರ ನಿಯೋಗವು ಗೃಹ ಸಚಿವರ ಹೇಳಿಕೆಯ ಮಹತ್ವವನ್ನು ಕಡಿಮೆಗೊಳಿಸುತ್ತಾ, ಇದೇನೂ ಹೊಸತಲ್ಲ ಎಂದಿತ್ತು.
ಅಲ್ಲದೆ ತೆಲಂಗಾಣ ಪ್ರತ್ಯೇಕ ರಾಜ್ಯ ಸ್ಥಾಪನೆ ಕುರಿತು ಮುಖ್ಯಮಂತ್ರಿ ಕೆ. ರೋಸಯ್ಯನವರ ನೇತೃತ್ವದ ಪಕ್ಷದ ಸಮಿತಿಯೊಂದನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲೇ ರಚಿಸಲಾಗಿತ್ತು. ಹಾಗಾಗಿ ಇದರಲ್ಲಿ ಹೊಸ ವಿಚಾರಗಳೇನೂ ಇಲ್ಲವೆಂದು ಅವರು ವಿವರಣೆ ನೀಡಿದ್ದರು.
ಇದಕ್ಕೂ ಮೊದಲು ಆಂಧ್ರಪ್ರದೇಶ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಅಷ್ಟೇನೂ ಸುಲಭವಲ್ಲ; ಇದಕ್ಕೆ ಕನಿಷ್ಠವೆಂದರೂ ಎರಡು ವರ್ಷಗಳು ಬೇಕೇ ಬೇಕು. ಹಾಗಾಗಿ ಯಾರು ಕೂಡ ಸಂಯಮ ಕಳೆದುಕೊಳ್ಳಬಾರದೆಂದು ಕರೆ ನೀಡಿದ್ದರು.
ಈಗಿಂದೀಗಲೇ ರಾಜ್ಯವನ್ನು ವಿಭಜಿಸಲು ಸಾಧ್ಯವಿಲ್ಲ. ಅಗತ್ಯ ಬಿದ್ದರೆ ಈ ಸಂಬಂಧ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಲಾಗುತ್ತದೆ. ಅಲ್ಲಿ ಬಹುಮತ ಸಿಕ್ಕಿದಲ್ಲಿ ಮಾತ್ರ ಶಿಫಾರಸ್ಸು ಮಾಡಲಾಗುತ್ತದೆ. ಹಾಗಾಗಿ ಯಾರು ಕೂಡ ಭಾವೋದ್ರೇಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ರೋಸಯ್ಯ ಸ್ಪಷ್ಟಪಡಿಸಿದ್ದರು.
ಇವೆಲ್ಲದರ ಹಿಂದೆ ಕಾಂಗ್ರೆಸ್ ತಂತ್ರವೊಂದನ್ನು ಹೆಣೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿಯವರ ಫೇಮ್ ಕಾಂಗ್ರೆಸ್ಸಿಗೆ ಹೊಸ ಕಳೆಯನ್ನೇ ಒದಗಿಸಿತ್ತು. ಮತ್ತೆ ವಿಭಜನೆಯ ಹಾದಿ ಹಿಡಿದರೆ, ಅದರ ಲಾಭ ಟಿಆರ್ಎಸ್‌ಗೆ ಲಭಿಸುವುದು ಖಚಿತ. ಅದರಲ್ಲಿ ತನಗೂ ಪಾಲು ಸಿಗಬಹುದಾದರೂ, ವಿಭಜನೆಯ ವಿರೋಧವನ್ನು ಮೆಟ್ಟಿ ನಿಲ್ಲುವ ಮಟ್ಟದಲ್ಲಿ ಸಿಗಲಾರದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ವಲಯದಲ್ಲಿದೆ.
ಆದರೂ ಕಾಂಗ್ರೆಸ್ ಪ್ರಸಕ್ತ ಸ್ಥಿತಿಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಈಗ ಸಿಡಿದಿರುವ ಶಾಸಕರು, ಸಂಸದರನ್ನು ಸಮಾಧಾನಗೊಳಿಸಿ ಅವರ ರಾಜಿನಾಮೆಗಳನ್ನು ವಾಪಸ್ ಮಾಡಿಸುವುದು, ಅತ್ತ ತೆಲಂಗಾಣ ಹೋರಾಟಗಾರರಿಂದ ಮತ್ತೆ ಪ್ರತಿಭಟನೆಯ ಕಿಚ್ಚು ಹೊರ ಬರದಂತೆ ತಡೆಯುವುದು ಅದರ ಮುಂದಿರುವ ಪ್ರಾಥಮಿಕ ಅಗತ್ಯಗಳು.