ಭಿಕ್ಷಾಟನೆ ಹಿಂದೆ ವ್ಯವಸ್ಥಿತ ಜಾಲ ಇದೆಯೇ? :ಸುಪ್ರೀಂಕೋರ್ಟ್
ನವದೆಹಲಿ, ಶನಿವಾರ, 12 ಡಿಸೆಂಬರ್ 2009( 09:40 IST )
PTI
ರಾಜಧಾನಿಯಲ್ಲಿ ನಡೆಯುತ್ತಿರುವ ಭಿಕ್ಷಾಟನೆ ಜಾಲದ ಹಿಂದೆ ವ್ಯವಸ್ಥಿತವಾದ ಸಂಘಟನೆಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ ಎಂದು ಸುಪ್ರೀಂಕೋರ್ಟ್ ಶುಕ್ರವಾರ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ.
'ಭಿಕ್ಷಾಟನೆ ನಡೆಸುವವರ ಹಿಂದೆ ವ್ಯವಸ್ಥಿತವಾದ ಜಾಲ ಕಾರ್ಯಾಚರಣೆ ನಡೆಸುತ್ತಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಿ' ಎಂದು ಸುಪ್ರೀಂಕೋರ್ಟ್ ಪೀಠ ದೆಹಲಿ ಸರ್ಕಾರಕ್ಕೆ ಆದೇಶ ನೀಡಿದೆ.
ರಾಜಧಾನಿಯಲ್ಲಿ ಬೇಕಾಬಿಟ್ಟಿಯಾಗಿ ಭಿಕ್ಷಾಟನೆ ನಡೆಸುತ್ತಿರುವ ಕುರಿತು ಸೂಕ್ತವಾದ ಕ್ರಮ ಕೈಗೊಳ್ಳುವ ಬಗ್ಗೆ ಕೋರಿ ಸಾಲಿಸಟರ್ ಜನರಲ್ ಮೋಹನ್ ಪರಸರನ್ ಅವರಿಗೆ ವರದಿ ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್ ತಿಳಿಸಿದೆ.
ಭಿಕ್ಷುಕರ ಜಾಲ ಮತ್ತು ಭಿಕ್ಷುಕರಿಗೆ ಸೂಕ್ತ ವಸತಿಯನ್ನು ಕಲ್ಪಿಸುವಂತೆ ಕೋರಿ ಕಾರ್ಣಿಕ್ ಸ್ವಾಹೇನಿ ಅವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಫೆಬ್ರುವರಿ ಎರಡನೇ ವಾರದಲ್ಲಿ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.