ತೆಲಂಗಾಣ ಎಫೆಕ್ಟ್ ದೇಶದಾದ್ಯಂತ ಭಾರೀ ವೇಗದಲ್ಲಿ ಪಸರಿಸುತ್ತಿದೆ. ಮುಖ್ಯಮಂತ್ರಿ ಮಾಯಾವತಿ ಉತ್ತರ ಪ್ರದೇಶ ವಿಭಜನೆಗೆ ಒಲವು ತೋರಿಸಿದರೆ, ಗೂರ್ಖಾಲ್ಯಾಂಡ್ ಬೇಡಿಕೆಗೆ ಸಂಸದ, ಬಿಜೆಪಿ ಮಾಜಿ ಮುಖಂಡ ಜಸ್ವಂತ್ ಸಿಂಗ್ ಹಾಗೂ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಬೆಂಬಲ ಸೂಚಿಸಿದ್ದಾರೆ.
ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಿಸಿ ರಾಜ್ಯ ಸ್ಥಾನಮಾನ ನೀಡಲು ಕೇಂದ್ರ ಸರಕಾರ ಮೌಖಿಕ ಒಪ್ಪಿಗೆ ನೀಡಿರುವ ಬೆನ್ನಿಗೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದ್ದ ಉಳಿದ ರಾಜ್ಯಗಳ ಸ್ಥಾಪನೆಗೂ ಒತ್ತಾಯಗಳು ಎಲ್ಲೆಡೆಗಳಿಂದ ಕೇಳಿ ಬರಲಾರಂಭಿಸಿವೆ.
ಉತ್ತರ ಪ್ರದೇಶವನ್ನು ವಿಭಜಿಸಿ... ಹೀಗೆಂದವರು ಸ್ವತಃ ಅಲ್ಲಿನ ಮುಖ್ಯಮಂತ್ರಿ ಕುಮಾರಿ ಮಾಯಾವತಿ. ಉತ್ತರ ಪ್ರದೇಶದಿಂದ ಬಂದೀಲ್‌ಖಂಡ್ ಮತ್ತು ಹರಿತ್ ಪ್ರದೇಶ್ ಎಂಬ ಎರಡು ಹೊಸ ರಾಜ್ಯಗಳನ್ನು ಸೃಷ್ಟಿಸಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಸಣ್ಣ ರಾಜ್ಯಗಳಿಂದ ಅಭಿವೃದ್ಧಿ ಸಾಧ್ಯತೆ ಹೆಚ್ಚು ಎಂದು ನಂಬಿಕೊಂಡಿರುವ ಪಕ್ಷ ನಮ್ಮದು. ಹಾಗಾಗಿ ಪ್ರತ್ಯೇಕ ರಾಜ್ಯ ಬೇಡಿಕೆಗೆ ನಮ್ಮಿಂದ ಸಂಪೂರ್ಣ ಸಹಕಾರವಿದೆ. ಈ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಈಗಾಗಲೇ ಪತ್ರವೊಂದನ್ನು ಬರೆದಿದ್ದೇನೆ. ಹರಿತ್ ಪ್ರದೇಶಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯೊಂದನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶೀಘ್ರದಲ್ಲೇ ತೆಗೆದುಕೊಳ್ಳಲಾಗುತ್ತದೆ ಎಂದು ಮಾಯಾವತಿ ತಿಳಿಸಿದ್ದಾರೆ.
ಬಿಹಾರವನ್ನೂ ಹೋಳು ಮಾಡಿ: ಲಾಲೂ ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಧಾರವನ್ನು ಬೆಂಬಲಿಸಿರುವ ಲಾಲೂ ಪ್ರಸಾದ್ ಯಾದವ್, ಬಿಹಾರವನ್ನೂ ವಿಭಜಿಸಬೇಕೆಂದು ಸಲಹೆ ಮಾಡಿದ್ದಾರೆ.
ಬಿಹಾರದಿಂದ ಮಿಥಿಲಾಂಚಲ ಎಂಬ ಹೊಸ ರಾಜ್ಯವನ್ನು ಸೃಷ್ಟಿಸಬೇಕೆಂಬುದು ಅವರ ಬೇಡಿಕೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಿದ್ದೇನೆ ಎಂದು ಲಾಲೂ ತಿಳಿಸಿದ್ದಾರೆ.
ಪೂರ್ವಾಂಚಲ ಮತ್ತು ಬಂದೇಲ್‌ಖಂಡ್ ರಾಜ್ಯಗಳ ರಚನೆಗೂ ತನ್ನ ಬೆಂಬಲವಿದೆ ಎಂದು ಜಾರ್ಖಂಡ್ ಚುನಾವಣಾ ಪ್ರಚಾರ ನಿರತರಾಗಿದ್ದ ಅವರು ಹೇಳಿದ್ದಾರೆ.
ಗೂರ್ಖಾಲ್ಯಾಂಡ್‌ಗೆ ಜಸ್ವಂತ್ ಬೆಂಬಲ... ಗೃಹ ಸಚಿವ ಪಿ. ಚಿದಂಬರಂ ಅವರನ್ನು ಗೂರ್ಖಾ ಜನಮುಕ್ತಿ ಮೋರ್ಚಾ ಸದಸ್ಯರು ಭೇಟಿಯಾಗಲಿದ್ದು, ಈ ಗುಂಪಿಗೆ ಜಸ್ವಂತ್ ಸಿಂಗ್ ನೇತೃತ್ವ ವಹಿಸಲಿದ್ದಾರೆ. ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯವನ್ನಾಗಿಸಬೇಕು ಎಂಬುದೇ ಇವರ ಬೇಡಿಕೆ.
ಗೂರ್ಖಾ ಜನಮುಕ್ತಿ ಮೋರ್ಚಾ ಈಗಾಗಲೇ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ. ಬೇಡಿಕೆ ಈಡೇರದಿದ್ದರೆ ಪರಿಸ್ಥಿತಿ ಕೈ ಮೀರಲಿದೆ ಎಂದು ಜಸ್ವಂತ್ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.