ರಾಯಲಸೀಮೆ ಮತ್ತು ಆಂಧ್ರ ಕರಾವಳಿ ಪ್ರಾಂತ್ಯಗಳ ಘಟನೆಗಳು ಮತ್ತು ಶಾಸಕ, ಸಂಸದರ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ತೆಲಂಗಾಣ ನಾಯಕರಿಗೆ ಸೂಚನೆ ನೀಡಿರುವ ಕೆ. ಚಂದ್ರಶೇಖರ ರಾವ್, ಪ್ರತ್ಯೇಕ ರಾಜ್ಯ ಸ್ಥಾಪನೆಗಾಗಿ ಇನ್ನಷ್ಟು ಸಮಯ ಕಾಯಲು ಸಿದ್ಧ ಎಂದು ಹೇಳಿದ್ದಾರೆ.
ಡಿಸೆಂಬರ್ 2ರಿಂದ ಆಮರಣಾಂತ ಉಪವಾಸ ಕೈಗೊಂಡಿದ್ದ ರಾವ್ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಪಕ್ಷದ ಕಾರ್ಯಕರ್ತರು, ನಾಯಕರ ಜತೆ ಸಮಾಲೋಚನೆ ನಡೆಸಿದರು. ತೆಲಂಗಾಣ ವಿರೋಧಿ ಪ್ರತಿಭಟನೆಗಳ ಕುರಿತು ಯಾವುದೇ ಹೇಳಿಕೆಗಳನ್ನು ಅಥವಾ ಪ್ರತಿಭಟನೆಗಳನ್ನು ಮಾಡುವ ಗೋಜಿಗೆ ಹೋಗಬೇಡಿ ಎಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಆಸ್ಪತ್ರೆಯಿಂದಲೇ ರ‌್ಯಾಲಿಯಲ್ಲಿ ಮನೆಗೆ ಹೋಗಲು ರಾವ್ ಮೊದಲು ನಿರ್ಧರಿಸಿದ್ದರಾದರೂ, ರಾಜಕೀಯ ಬೆಳವಣಿಗೆಗಳ ಕಾರಣ ಅದನ್ನು ರದ್ದುಪಡಿಸಿದ್ದರು. ಅಲ್ಲದೆ ಮಾಧ್ಯಮಗಳಿಂದ ದೂರ ಉಳಿಯುವ ನಿರ್ಧಾರವನ್ನು ತೆಗೆದುಕೊಂಡಿರುವ ಅವರು, ತನ್ನ ಮಗನನ್ನೂ ಇದೇ ನಡೆಯನ್ನು ಅನುಸರಿಸುವಂತೆ ಸೂಚಿಸಿದ್ದಾರೆ.
ಕಾಯಲು ಸಿದ್ಧ: ಟಿಆರ್ಎಸ್ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯನ್ನು ತೆಗೆದುಕೊಳ್ಳುವ ಅಗತ್ಯವಿದ್ದು, ತಾವು ತಾಳ್ಮೆಯಿಂದ ಕಾಯಲು ಸಿದ್ಧವಿದ್ದೇವೆ ಎಂದು ತೆಲಂಗಾಣ ರಾಷ್ಟ್ರೀಯ ಹೋರಾಟ ಸಮಿತಿ ತಿಳಿಸಿದೆ.
ರಾಯಲಸೀಮೆ ಮತ್ತು ಆಂಧ್ರ ಕರಾವಳಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಅರ್ಥೈಸಿಕೊಂಡಿರುವ ಪಕ್ಷದ ಹಿರಿಯ ಮುಖಂಡ ಕೆ.ಟಿ. ರಾಮ ರಾವ್, ಅಸೆಂಬ್ಲಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿರುವುದರಿಂದ ಕಾದು ನೋಡುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ನೂತನ ರಾಜ್ಯದ ಅಸ್ತಿತ್ವಕ್ಕೆ ಕಂಡು ಬಂದಿರುವ ನಿರೀಕ್ಷಿತ ವಿರೋಧವನ್ನು ತಾವು ಗಮನಿಸುತ್ತಿದ್ದೇವೆ. ನಾವು ಕಾಂಗ್ರೆಸ್ಸಿನ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಂಡಿದ್ದೇವೆ. ತೆಲಂಗಾಣ ರಚನೆಗೆ ಯುಪಿಎ ತೋರಿಸಿರುವ ಬದ್ಧತೆಗೆ ನಾವು ಕೃತಜ್ಞರು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ತೆಲಂಗಾಣ ರಾಜ್ಯ ರಚನೆ ಕುರಿತಂತೆ ಮತ್ತೆ ಪ್ರತಿಭಟನೆ, ರ‌್ಯಾಲಿಗಳನ್ನು ನಡೆಸುವುದಿಲ್ಲ ಎಂದು ಅವರು ಭರವಸೆ ನೀಡಿದರು.