ಉದ್ದೇಶಿತ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಮುತ್ತಿನ ನಗರಿ ಹೈದರಾಬಾದ್ ರಾಜಧಾನಿ ಎಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ವರಿಷ್ಠ ಕೆ.ಚಂದ್ರಶೇಖರ ರಾವ್ ಶನಿವಾರ ಸ್ಪಷ್ಟಪಡಿಸಿದ ಅವರು, ಪ್ರತ್ಯೇಕ ತೆಲಂಗಾಣಕ್ಕೆ ಆಂಧ್ರಪ್ರದೇಶ ರಾಜಧಾನಿಯಾಗುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಚಂದ್ರಶೇಖರ ರಾವ್ ಅವರು ಹನ್ನೊಂದು ದಿನಗಳ ಕಾಲ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಕೊನೆಗೆ ಕೇಂದ್ರ ಸರ್ಕಾರ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು.
ತೆಲಂಗಾಣಕ್ಕೆ ಹೈದರಾಬಾದ್ ನಗರವೇ ರಾಜಧಾನಿ, ಅದನ್ನು ಬಿಟ್ಟು ಆಂಧ್ರಪ್ರದೇಶವನ್ನು ರಾಜಧಾನಿ ಮಾಡಲು ತಮ್ಮ ಸಹಮತ ಇಲ್ಲ ಎಂದು ಎನ್‌ಡಿಟಿ ಜತೆ ಮಾತನಾಡುತ್ತ ರಾವ್ ವಿವರಿಸಿದ್ದಾರೆ. ಹೈದರಾಬಾದ್ ಅನ್ನು ಚಂಡೀಗಢ ರಾಜ್ಯಕ್ಕೆ ಹೋಲಿಸಬೇಡಿ, ಇದು ನೂತನ ವಿಭಜನೆ ಅಲ್ಲ ಎಂದಿರುವ ಅವರು, ತೆಲಂಗಾಣ ರಾಜ್ಯ ಆಗುವ ಮೊದಲೇ ಹೈದರಾಬಾದ್ ನಮ್ಮ ಭಾಗಕ್ಕೆ ಸೇರಿದೆ, ಅಲ್ಲದೇ ಆಂಧ್ರಕ್ಕೆ ಕರ್ನೂಲ್ ರಾಜಧಾನಿಯಾಗಿತ್ತು ಎಂದರು.
ಹೈದರಾಬಾದ್ ಭೌಗೋಳಿಕವಾಗಿಯೂ ಕೂಡ ತೆಲಂಗಾಣ ಪ್ರದೇಶದ ವ್ಯಾಪ್ತಿಯೊಳಗಿದೆ, ಹಾಗಿದ್ದ ಮೇಲೆ ಹೈದರಾಬಾದ್ ಅನ್ನು ರಾಧಾನಿಯನ್ನಾಗಿ ಯಾಕೆ ಮಾಡಲು ಸಾಧ್ಯವಿಲ್ಲ ಎಂದು ರಾವ್ ಪ್ರಶ್ನಿಸಿದರು.