ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಭವನದಲ್ಲಿ ರಾಸಲೀಲೆ: ಆಂಧ್ರ ರಾಜ್ಯಪಾಲ ವಿವಾದದಲ್ಲಿ
(Narayan Dutt Tiwari | Andhra Pradesh | High Court | ABN channel | Governor)
ಆಂಧ್ರಪ್ರದೇಶ ರಾಜ್ಯಪಾಲ ಎನ್.ಡಿ. ತಿವಾರಿ ಎನ್ನಲಾಗುತ್ತಿರುವ 85ರ ವಯೋವೃದ್ಧರೊಬ್ಬರು ರಾಜಭವನದಲ್ಲಿ ಮೂವರು ಮಹಿಳೆಯರೊಂದಿಗೆ ಅಶ್ಲೀಲ ಭಂಗಿಯಲ್ಲಿದ್ದ ಸುದ್ದಿಯನ್ನು ಪ್ರಸಾರ ಮಾಡದಂತೆ ಆಂಧ್ರಪ್ರದೇಶ ಹೈಕೋರ್ಟು ನಿರ್ದೇಶನ ನೀಡಿರುವುದರೊಂದಿಗೆ, ರಾಜ್ಯಪಾಲರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಪೊಲೀಸರು ಹೈಕೋರ್ಟ್ ನೋಟೀಸನ್ನು ಒಪ್ಪಿಸುವ ಮೊದಲೇ ಎಬಿಎನ್ ಚಾನೆಲ್, ಅದಾಗಲೇ ಈ ವ್ಯಕ್ತಿಯು ಅಶ್ಲೀಲ ಭಂಗಿಯಲ್ಲಿದ್ದ ವೀಡಿಯೋ ಉಳ್ಳ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ನೋಟೀಸ್ ಬಂದ ಹಿನ್ನೆಲೆಯಲ್ಲಿ ಅದನ್ನು ಪದೇ ಪದೇ ಪ್ರಸಾರ ಮಾಡಲಿಲ್ಲವಾದರೂ, ರಾಜ್ಯಪಾಲರ ವರ್ತನೆ ಕುರಿತಂತೆ ಸಂದರ್ಶನಗಳು, ಚರ್ಚೆಗಳನ್ನು ಮುಂದುವರಿಸಿತ್ತು. ಇದು ಹಿಂದಿನ ಕೋರ್ಟ್ ಆದೇಶದ ಉಲ್ಲಂಘನೆ ಎಂದು ಆರೋಪಿಸಿ ರಾಜ್ಯಪಾಲರ ವಕೀಲರು ಚಾನೆಲ್‌ಗೆ ಕಾನೂನು ನೋಟೀಸ್ ಜಾರಿಗೊಳಿಸಿದ್ದಾರೆ.
ಉತ್ತರಪ್ರದೇಶ ಮತ್ತು ಉತ್ತರಾಂಚಲಗಳಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ನಾರಾಯಣ ದತ್ತ ತಿವಾರಿ 86ರ ವಯೋವೃದ್ಧರಾಗಿದ್ದು, ಜೀವನದ ಸಂಜೆಯಲ್ಲಿದ್ದಾರೆ. ಇವೆಲ್ಲವೂ ಸುಳ್ಳು ಆರೋಪಗಳಾಗಿದ್ದು, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯ ನಿಭಾಯಿಸುವುದನ್ನು ಮುಂದುವರಿಸುತ್ತಾರೆ. ಸಾಂವಿಧಾನಿಕ ಉನ್ನತ ಹುದ್ದೆಯಲ್ಲಿರುವವರನ್ನು ಅನವಶ್ಯ ವಿವಾದಕ್ಕೆ ಎಳೆದು ತರುತ್ತಿರುವುದು ತೀರಾ ದುರದೃಷ್ಟಕರ ಎಂದು ರಾಜಭವನದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.
ರಾಜ್ಯಪಾಲರನ್ನು ವಜಾಗೊಳಿಸಲು ಆಗ್ರಹ ಘಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಕೀಯ ಪಕ್ಷಗಳು, ರಾಜ್ಯಪಾಲರನ್ನು ವಜಾಗೊಳಿಸಲು ಒತ್ತಾಯಿಸತೊಡಗಿವೆ. ತಿವಾರಿ ರಾಜೀನಾಮೆ ನೀಡಬೇಕು ಇಲ್ಲವೇ ಉಚ್ಚಾಟಿಸಬೇಕು ಮತ್ತು ಈ ಘಟನೆಯಲ್ಲಿ ಕೆಲವು ಸಂಸದರು ಕೂಡ ಹೈದರಾಬಾದ್ ರಾಜಭವನದಲ್ಲಿ ಇದ್ದಿರುವುದರಿಂದ ಈ ಕುರಿತು ಸಿಬಿಐ ತನಿಖೆಗೆ ಕೇಂದ್ರವು ಆದೇಶಿಸಬೇಕು ಎಂದು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.
ಎಡಪಕ್ಷಗಳು: ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ಗೆ ಪತ್ರಬರೆದು, ರಾಜ್ಯಪಾಲರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವಂತೆ ಸಿಪಿಐ ಆಗ್ರಹಿಸಿದ್ದರೆ, ರಾಜ್ಯಪಾಲರನ್ನು ವಜಾಗೊಳಿಸುವಂತೆ ಸಿಪಿಎಂ ಒತ್ತಾಯಿಸಿದೆ.
ಈ ಕುರಿತು ಮಹಿಳಾ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದರಿಂದಾಗಿ ರಾಜಭವನದ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಪೂರ್ವ ಗೋದಾವರಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ಭಾರೀ ಪ್ರತಿಭಟನಾ ರ‌್ಯಾಲಿಗಳು ನಡೆದಿದ್ದು, ರಾಜ್ಯಪಾಲರ ಪ್ರತಿಕೃತಿಯನ್ನೂ ದಹಿಸಲಾಗಿದೆ.
ಈ ಮಧ್ಯೆ, ಎಬಿಎನ್ ವರದಿಗೆ ಸಂಬಂಧಿಸಿದ ಯಾವುದೇ ವರದಿಯನ್ನು ಪ್ರಕಟಿಸದಂತೆ ಎಲ್ಲ ಪತ್ರಿಕೆಗಳಿಗೆ ರಾಜಭವನದಿಂದ ಮನವಿ ಬಂದಿದ್ದು, ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಆದರೆ, ಆಂಧ್ರ ಜ್ಯೋತಿ ಪತ್ರಿಕೆಯ ಆನ್‌ಲೈನ್ ಆವೃತ್ತಿಯಲ್ಲಿ ಈ 'ವಯೋವೃದ್ಧ'ರು ತರುಣಿಯೊಂದಿಗೆ ಲೈಂಗಿಕ ಬಿಸಿ ದೃಶ್ಯಗಳೊಂದಿಗಿದ್ದ ಚಿತ್ರವನ್ನೂ ಪ್ರಕಟಿಸಿದೆ.