ತನಗೆ ಕೆಲವು ವಿಷಯಗಳಲ್ಲಿ, ವಿಶೇಷವಾಗಿ ಅಯೋಧ್ಯಾ ಆಂದೋಲನ ಮತ್ತು ಗೋಧ್ರಾ ಹಿಂಸಾಚಾರದ ನಂತರದ ಅವಧಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪದಚ್ಯುತಗೊಳಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎಂಬುದನ್ನು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.
ಅಯೋಧ್ಯಾ ಚಳವಳಿಯಲ್ಲಿ ಬಿಜೆಪಿಯು ನೇರವಾಗಿ ಭಾಗಿಯಾಗುವುದು ಅವರಿಗೆ (ಅಟಲ್‌ಗೆ) ಇಷ್ಟವಿರಲಿಲ್ಲ. ಆದರೂ ಪಕ್ಷದ ಸಾಮೂಹಿಕ ನಿರ್ಧಾರಕ್ಕೆ ಬದ್ಧರಾಗುವ ಮೂಲಕ ಅವರು ಆಂತರಿಕ ಪ್ರಜಾಸತ್ತೆಯಲ್ಲಿ ತಮಗಿರುವ ನಂಬಿಕೆ, ವಿಶ್ವಾಸವನ್ನು ತೋರ್ಪಡಿಸಿದರು ಎಂದು ಶುಕ್ರವಾರ 85ನೇ ಹುಟ್ಟು ಹಬ್ಬ ಆಚರಿಸಿಕೊಂಡ ವಾಜಪೇಯಿ ಕುರಿತ ಲೇಖನವೊಂದರಲ್ಲಿ ಆಡ್ವಾಣಿ ಹೇಳಿದ್ದಾರೆ.
1992ರ ಡಿಸೆಂಬರ್ ತಿಂಗಳಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಲ್ ಅವರನ್ನೂ ದೋಷಿ ಎಂದು ಲಿಬರ್ಹಾನ್ ಆಯೋಗ ಹೇಳಿರುವುದಕ್ಕೆ ಆಡ್ವಾಣಿ ತೀವ್ರವಾಗಿ ಆಕ್ಷೇಪಿಸಿದ್ದರು.
ಗುಜರಾತಿನ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಇಟ್ಟು, ನೂರಾರು ಕರಸೇವಕರ ಹತ್ಯೆಯಾದ ಬಳಿಕ ಉಂಟಾದ ಗಲಭೆಯ ಸಂದರ್ಭ, ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೆಳಗಿಳಿಸುವ ವಿಷಯಕ್ಕೆ ಸಂಬಂಧಿಸಿದಂತೆಯೂ ಅಟಲ್ ಮತ್ತು ತಾನು ಪರಸ್ಪರ ಮುಖ ನೋಡುತ್ತಿರಲಿಲ್ಲ ಎಂಬುದನ್ನೂ ಆಡ್ವಾಣಿ ಉಲ್ಲೇಖಿಸಿದ್ದಾರೆ.
ಮೋದಿ ರಾಜೀನಾಮೆ ಕೇಳಬೇಕು ಎಂದು ಆಗ್ರಹಿಸುವವರಲ್ಲಿ ಅಟಲ್‌ಜೀ ಕೂಡ ಒಬ್ಬರಾಗಿದ್ದರು. ಆದರೆ, ಗುಜರಾತಿನಲ್ಲಿ ಹಲವಾರು ಮಂದಿಯನ್ನು ಮಾತನಾಡಿಸಿದ ಬಳಿಕ, ಮೋದಿಯನ್ನು ಅನವಶ್ಯವಾಗಿ ಗುರಿಯಾಗಿಸಲಾಗಿತ್ತು ಎಂಬುದನ್ನು ನಾನು ಕಂಡುಕೊಂಡಿದ್ದೆ ಎಂದು ಆಡ್ವಾಣಿ ಹೇಳಿದ್ದಾರೆ.
ಆದರೂ, ನನಗೆ ಭಿನ್ನ ಅಭಿಪ್ರಾಯ ಇದೆ ಎಂಬುದನ್ನು ತಿಳಿದರೆ, ಅಟಲ್‌ಜೀ ಅವರೆಂದಿಗೂ ತಮ್ಮ ನಿರ್ಧಾರದಂತೆ ಮುಂದುವರಿಯುತ್ತಿರಲಿಲ್ಲ ಎಂಬುದನ್ನು ಕೂಡ ಆಡ್ವಾಣಿ ಹೇಳಿದರು. ತುರ್ತು ಪರಿಸ್ಥಿತಿ ಕಾಲದಲ್ಲಿ ವಾಜಪೇಯಿ ಜೊತೆಗೆಯೇ ಜೈಲಿನಲ್ಲಿದ್ದ ಆಡ್ವಾಣಿ, ಆ ಬಳಿಕ ವಾಜಪೇಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಒಬ್ಬ ಮುಖ್ಯಮಂತ್ರಿಯಾಗಿ, ಹಿಂಸಾಚಾರ ತಡೆಯಲು ಮೋದಿ ಏನನ್ನು ಮಾಡಲೂ ವಿಫಲರಾಗಿದ್ದಾರೆ. ಹಾಗಿರುವುದರಿಂದ ಅವರು ಪದತ್ಯಾಗ ಮಾಡಬೇಕು ಎಂದು ವಾಜಪೇಯಿ ಹೇಳಿದ್ದರು.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿರುವ ಈ ಲೇಖನದಲ್ಲಿ, ವಾಜಪೇಯಿಯವರ ವಾಕ್‌ಚಾತುರ್ಯವು ತನ್ನಲ್ಲಿ ಕೀಳರಿಮೆ ಮೂಡಿಸಿತ್ತು ಎಂಬುದನ್ನೂ ಆಡ್ವಾಣಿ ಒಪ್ಪಿಕೊಂಡಿದ್ದಾರೆ.