ತಾಕತ್ತಿದ್ರೆ ಶಿವಸೇನೆ ಮೈತ್ರಿ ಕೈಬಿಡಿ: ಬಿಜೆಪಿಗೆ ಕಾಂಗ್ರೆಸ್
ನವದೆಹಲಿ, ಮಂಗಳವಾರ, 2 ಫೆಬ್ರವರಿ 2010( 09:32 IST )
ಉತ್ತರ ಭಾರತೀಯರನ್ನು ರಕ್ಷಿಸಲು ಸಂಘಪರಿವಾರದ ಕಾರ್ಯಕರ್ತರು ಮುಂದಾಗಬೇಕು ಎಂದು ಆರ್‌ಎಸ್‌ಎಸ್ ನೀಡಿದ್ದ ಕರೆಗೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಮೂಲಕ ವಾಗ್ದಾಳಿ ತಾರಕಕ್ಕೇರಿದೆ. ಏತನ್ಮಧ್ಯೆ ಭಿನ್ನಮತದ ಲಾಭ ಪಡೆಯಲು ಯತ್ನಿಸಿರುವ ಕಾಂಗ್ರೆಸ್, ಧೈರ್ಯವಿದ್ದರೆ ಶಿವಸೇನೆ ಮೈತ್ರಿ ಕೈಬಿಡಿ ಎಂದು ಬಿಜೆಪಿಗೆ ಸವಾಲೆಸೆದಿದೆ.
ಉತ್ತರ ಭಾರತೀಯರ ಪರ ನಿಂತ ಆರ್‌ಎಸ್‌ಎಸ್‌ಗೆ ಬಿಜೆಪಿ ಕೂಡ ಬೆಂಬಲ ವ್ಯಕ್ತಪಡಿಸಿರುವುದು ಶಿವಸೇನೆಯ ಆಕ್ರೋಶಕ್ಕೆ ಗುರಿಯಾಗಿದೆ. ಆರ್‌ಎಸ್‌ಎಸ್ ವಕ್ತಾರ ರಾಮ್ ಮಾಧವ್ ಹೇಳಿಕೆಯ ಹಿನ್ನಲೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೊಸ ಕ್ಯಾತೆ ತೆಗೆದಿದ್ದು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವನ್ನು ಮತ್ತೆ ಕೆದಕಿದ್ದಾರೆ. ಸಾವಿರಾರು ಮರಾಠಿಗರು ಕರ್ನಾಟಕದಲ್ಲಿ ಮೂಲೆಗುಂಪಾಗಿರುವಾಗ ಅವರ ಪರ ಹೇಳಿಕೆ ನೀಡದ ಆರ್‌ಎಸ್‌ಎಸ್ ಮುಂಬೈ ವಿಚಾರದಲ್ಲಿ ಮೂಗು ತೂರಿಸಬೇಕಿಲ್ಲ ಎಂದು ತಿರುಗೇಟು ನೀಡಿದ್ದರು.
ಇದೀಗ ಆರ್‌ಎಸ್‌ಎಸ್ ಹೊತ್ತಿಸಿದ ಕಿಡಿ ಶಿವಸೇನೆಯನ್ನು ಕೆರಳಿಸಿದೆ. ಆದರೆ ಕಾಂಗ್ರೆಸ್, ನಿಮಗೆ ನಿಜವಾದ ಹೊಣೆಗಾರಿಕೆ ಇದ್ದರೆ ಶಿವಸೇನಾ ಸಂಘದಿಂದ ಹೊರಬನ್ನಿ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.
ಜಾತಿ, ಪಂಗಡ, ಪ್ರಾಂತೀಯ ಮನೋಭಾವಕ್ಕಿಂತ ನಾವೆಲ್ಲ ಭಾರತೀಯರು ಎಂಬುದನ್ನು ಮನಗಾಣಬೇಕು ಎಂಬುದು ಸಂಘ ಪರಿವಾರದ ನಿಲುವು, ಆದರೆ ಭಾಷಿಕ ನಿಲುವಿಗೆ ಅಂಟಿಕೊಂಡ ಶಿವಸೇನೆಗೆ ಆರ್‌ಎಸ್‌ಎಸ್ ಹೇಳಿಕೆ ಬಿಸಿ ಮುಟ್ಟಿಸಿದೆ. ಅಲ್ಲದೇ, ಇದೀಗ ವಿವಾದ ರಾಜಕೀಯವಾಗಿಯೂ ಬಿಸಿಯೇರತೊಡಗಿದೆ.