ಶಿವಸೇನೆ ವಿರುದ್ಧ ಆರ್‌ಎಸ್‌ಎಸ್ ತಿರುಗಿ ಬಿದ್ದ ಬೆನ್ನಲ್ಲೇ, ಮುಂಬೈಗೆ ವಲಸಿಗರ(ಉತ್ತರ ಭಾರತೀಯರು, ಬಿಹಾರಿಗಳು) ಪ್ರವೇಶಕ್ಕೆ ಅವಕಾಶ ಕೊಡಲ್ಲ ಎಂಬ ಶಿವಸೇನೆ ಮತ್ತು ಎಂಎನ್‌ಎಸ್ ಹೇಳಿಕೆ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಪಾಟ್ನಾದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದೊಳಗೆ ಭಾರತೀಯರ ಮೇಲೆ ದಾಳಿ ನಡೆಯುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದರು. ಭಾರತ ದೇಶ ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊರಗಿನವರ ಬಗ್ಗೆ ಶಿವಸೇನೆ ಮತ್ತು ಎಂಎನ್‌ಎಸ್ ಹೊಂದಿರುವ ಧೋರಣೆ ಮೊದಲು ಬದಲಾಗಬೇಕು. ಠಾಕ್ರೆ ಏನು ಹೇಳಿದ್ದಾರೆ ಎಂಬ ವಿಷಯದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದ ಯುವರಾಜ, ನನ್ನ ಆಸಕ್ತಿ ಇರುವುದು ಕೇವಲ ಒಂದೇ ಒಂದು ವಿಚಾರದಲ್ಲಿ, ಅದೇನೆಂದರೆ, ಭಾರತ ಎಲ್ಲರಿಗೂ ಸೇರಿದ್ದು. ಪ್ರತಿ ರಾಜ್ಯದ ವ್ಯಕ್ತಿಯೂ ಭಾರತದಲ್ಲಿ ಎಲ್ಲಿ ಬೇಕಾದರು ವಾಸಿಸಬಹುದು ಎಂದು ಹೇಳಿದರು.
2008ರ ನವೆಂಬರ್‌ನಲ್ಲಿ ನಡೆದ ಮುಂಬೈ ದಾಳಿಯ ಸಂದರ್ಭದಲ್ಲಿನ ರಕ್ಷಣಾ ಕಾರ್ಯಾಚರಣೆಯಲ್ಲಿನ ಕಮಾಂಡರ್‌ಗಳಲ್ಲಿ ಎಲ್ಲಾ ರಾಜ್ಯದವರು ಸೇರಿದ್ದರು. ಅದರಲ್ಲಿ ಬಿಹಾರಿಗಳು, ಉತ್ತರ ಪ್ರದೇಶದವರು ಇದ್ದರು. ಹಾಗಿದ್ದ ಮೇಲೆ 26/11ರ ದಾಳಿಯ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಬಿಹಾರ್, ಉತ್ತರ ಪ್ರದೇಶದ ಕಮಾಂಡರ್‌ಗಳು ವಾಪಸಾಗಲಿ ಎಂದು ಉದ್ಧವ್ ಠಾಕ್ರೆ ಯಾಕೆ ಹೇಳಿಲ್ಲ ಎಂದು ರಾಹುಲ್ ಪ್ರಶ್ನಿಸಿದರು. ಬಿಹಾರಿಗಳಿರಲಿ, ಉತ್ತರ ಪ್ರದೇಶದವರಿರಲಿ ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
26/11ರ ದಾಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆಬಡಿದದ್ದು ಉತ್ತರ ಭಾರತೀಯ ಕಮಾಂಡರ್‌ಗಳು ಎಂಬ ರಾಹುಲ್ ಗಾಂಧಿ ಹೇಳಿಕೆ ಹುತಾತ್ಮ ಯೋಧರಿಗೆ ಅಗೌರವ ಸಲ್ಲಿಸಿದಂತಾಗಿದೆ ಎಂದು ಉದ್ಧವ್ ಠಾಕ್ರೆ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿ ಲೇಖನ ಬರೆದಿರುವುದಕ್ಕೆ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಉಗ್ರರ ವಿರುದ್ಧ ಹೋರಾಡಿದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ತುಕಾರಾಮ್ ಓಮ್ಲೆ ಹಾಗೂ ಎಲ್ಲಾ ಮರಾಠಿ ಪೊಲೀಸರು, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಅಗೌರವ ತರುವಂತಹ ಹೇಳಿಕೆ ನೀಡಿದ್ದಾರೆ ಎಂದು ಕಟುವಾಗಿ ಠಾಕ್ರೆ ದೂರಿದ್ದರು.