ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಂ ಉದ್ಯೋಗಿ ಎರಡನೇ ಮದುವೆಯಾಗುವಂತಿಲ್ಲ: ಸುಪ್ರೀಂ (Muslim | second marriage | Rajasthan government | Liyaqat Ali)
Bookmark and Share Feedback Print
 
ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಕ್ಕೆ ಪ್ರತಿಯಾಗಿ ಕೆಲಸ ಕಳೆದುಕೊಂಡಿದ್ದ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಸರಕಾರಿ ಉದ್ಯೋಗದಲ್ಲಿರುವ ಮುಸ್ಲಿಮರ ಎರಡನೇ ಮದುವೆಗೆ ಕಾನೂನು ಸಮ್ಮತಿಯಿಲ್ಲ ಎಂದಿದೆ. ಆದರೆ ಇದು ಸಂವಿಧಾನ ಮಾನ್ಯ ಮಾಡಿರುವ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ನ್ಯಾಯಾಲಯ ನೇರ ಹಸ್ತಕ್ಷೇಪ ನಡೆಸಿದೆ ಎಂದು ಮುಸ್ಲಿಂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಈ ತೀರ್ಪು ಮುಸ್ಲಿಂ ಸಮುದಾಯಕ್ಕೆ ಆಘಾತ ತಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತಾ ತಿಳಿಯಪಡಿಸುತ್ತಿದ್ದೇವೆ. ಭಾರತೀಯ ಸಂವಿಧಾನ ಅನುಮತಿ ನೀಡಿರುವ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಇದೀಗ ಕೋರ್ಟ್ ನೇರ ಹಸ್ತಕ್ಷೇಪ ನಡೆಸಿದಂತಾಗಿದೆ ಎಂದು ರಾಜಸ್ತಾನ ಮುಸ್ಲಿಂ ವೇದಿಕೆ ವಕ್ತಾರ ಖಾರಿ ಮುಯಿನುದ್ದೀನ್ ಹೇಳಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಿಯಾಖತ್ ಆಲಿ ಎಂಬವರು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮತ್ತು ಸರಕಾರದ ಪೂರ್ವಾನುಮತಿ ಪಡೆಯದೆ ಎರಡನೇ ಮದುವೆಯಾಗಿದ್ದಕ್ಕೆ ರಾಜಸ್ತಾನ ರಾಜ್ಯ ಸರಕಾರವು ಅವರನ್ನು 23 ವರ್ಷಗಳ ಹಿಂದೆ ನೌಕರಿಯಿಂದ ವಜಾಗೊಳಿಸಿತ್ತು.

ಈ ಸಂಬಂಧ 1986ರಿಂದ ಹಲವು ನ್ಯಾಯಾಲಯಗಳ ಮೆಟ್ಟಿಲೇರಿರುವ ಆಲಿ, ತಾನು ಮೊದಲ ಪತ್ನಿಗೆ ಡೈವೋರ್ಸ್ ನೀಡಿದ ನಂತರವಷ್ಟೇ ಎರಡನೇ ಮದುವೆಯಾಗಿದ್ದೆ ಎಂದು ವಾದಿಸಿದ್ದರು. ಆದರೆ ರಾಜಸ್ತಾನ ನಾಗರಿಕ ಸೇವೆಗಳ ನಿಯಮಾವಳಿಗಳ ಪ್ರಕಾರ ಸರಕಾರಿ ಉದ್ಯೋಗಿಯೊಬ್ಬ ಯಾವುದೇ ಧರ್ಮದವನೇ ಆಗಿರಲಿ, ಸರಕಾರದ ಅನುಮತಿಯಿಲ್ಲದೆ ಎರಡನೇ ಮದುವೆಯಾಗುವಂತಿಲ್ಲ ಎಂಬುದನ್ನು ಎತ್ತಿ ಹಿಡಿದಿದ್ದ ರಾಜಸ್ತಾನ ಹೈಕೋರ್ಟ್, ಆಲಿ ಅರ್ಜಿಯನ್ನು ತಳ್ಳಿ ಹಾಕಿತ್ತು.

ಇದನ್ನು ಸುಪ್ರೀಂ ಕೋರ್ಟಿನಲ್ಲಿ ಅವರು ಪ್ರಶ್ನಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡ ಆಲಿ ವಿರುದ್ಧ ಜನವರಿ 25ರಂದು ತೀರ್ಪು ನೀಡುವ ಮೂಲಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ತಾನು ಎರಡನೇ ಮದುವೆಯಾಗಲು ಸರಕಾರದ ಒಪ್ಪಿಗೆ ಪಡೆಯಬೇಕಾಗಿಲ್ಲ ಎಂದು ಆಲಿ ವಾದಿಸುತ್ತಾ ಬಂದಿದ್ದರು. ನಿಯಮಗಳಂತೆ ಕೆಳಗಿನ ನ್ಯಾಯಾಲಯಗಳು ಆಲಿ ಪ್ರಕರಣದ ತನಿಖೆ ನಡೆಸಿದ್ದವು. ಅದರ ಪ್ರಕಾರ ಆಲಿ ಫರೀದಾ ಖತನ್ ಎಂಬ ಮಹಿಳೆಯನ್ನು ಮೊದಲು ಮದುವೆಯಾಗಿದ್ದರು. ಆಕೆಗೆ ವಿಚ್ಛೇದನ ನೀಡದೆ ಮಕ್ಸುದಾ ಖತನ್ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದರು.

ಸುಪ್ರೀಂ ಕೋರ್ಟಿನ ಈ ತೀರ್ಪಿಗೆ ಹಲವು ಮುಸ್ಲಿಂ ಸಂಘಟನೆಗಳು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಅವುಗಳ ಪ್ರಕಾರ ಮುಸ್ಲಿಂ ವೈಯಕ್ತಿಕ ಕಾನೂನಿನಂತೆ ಮುಸ್ಲಿಮರು ಎರಡನೇ ಮದುವೆಯ ಹಕ್ಕುಗಳನ್ನು ಹೊಂದಿದ್ದು, ಸರಕಾರವು ಅದನ್ನು ಒಪ್ಪಿಕೊಳ್ಳಬೇಕು. ಇದೇ ಕಾನೂನಿನಡಿಯಲ್ಲಿ ರಾಜ್ಯ ಸರಕಾರವು ತನ್ನ ಸೇವಾ ನಿಯಮಗಳಲ್ಲಿ ತಿದ್ದುಪಡಿ ತರಬೇಕು ಎಂದು ಮೊಹಮ್ಮದ್ ಸಲೀಂ ಎಂಬ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮಿಲ್ಲಿ ಕೌನ್ಸಿಲ್ ಎಂಬ ಸಂಘಟನೆಯ ಮುಜಾಹಿದ್ ನಖ್ವಿಯವರ ಪ್ರಕಾರ ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳಲ್ಲಿ ನೇರ ಹಸ್ತಕ್ಷೇಪ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ