26/11 ಭಯೋತ್ಪಾದಕರನ್ನು ಸದೆ ಬಡಿದದ್ದು ಉತ್ತರ ಭಾರತದ ಎನ್‌ಎಸ್‌ಜಿ ಕಮಾಂಡೋಗಳು ಎಂದು ಹೇಳಿಕೆ ನೀಡುವ ಮೂಲಕ ಮುಂಬೈಯನ್ನು ರಕ್ಷಿಸಲು ಪ್ರಾಣವನ್ನೇ ಪಣವಾಗಿಟ್ಟ ಹುತಾತ್ಮರಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
PTI
ಕೆಚ್ಚೆದೆಯಿಂದ ಹೋರಾಡಿದ ಹೇಮಂತ್ ಕರ್ಕೆರೆ, ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ತುಕರಾಮ್ ಓಂಬಲೆ, ಎಲ್ಲಾ ಧೈರ್ಯಶಾಲಿ ಮರಾಠಿ ಪೊಲೀಸರು ಮತ್ತು ಎನ್‌ಎಸ್‌ಜಿ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಮುಂತಾದ ಹುತಾತ್ಮರಿಗೆ ರಾಹುಲ್ ಗಾಂಧಿ ಅವಮರ್ಯಾದೆ ತೋರಿಸಿದ್ದಾರೆ ಎಂದು ಶಿವಸೇನೆಯ ಕಾರ್ಯಾಧ್ಯಕ್ಷ ತಿರುಗೇಟು ನೀಡಿದ್ದಾರೆ.
ಮುಂಬೈ ದಾಳಿ ನಡೆದಾಗ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿರುವ ಉದ್ಧವ್, ಕಾಂಗ್ರೆಸ್ ನಾಯಕನ ಮರಾಠಿ ವಿರೋಧಿ ಹೇಳಿಕೆಯನ್ನು ತಾನು ತೀವ್ರವಾಗಿ ಖಂಡಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತೀಯರ ಮೇಲೆ ದ್ವೇಷ ಸಾಧಿಸುತ್ತಿರುವ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕೃತ್ಯಗಳನ್ನು ಖಂಡಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮುಂಬೈ ಭಯೋತ್ಪಾದಕರನ್ನು ಸದೆಬಡಿದದ್ದು ಅದೇ ಎರಡು ರಾಜ್ಯದ ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಇತರ ರಾಜ್ಯಗಳವರು ಎಂದಿದ್ದರು.
ಬಿಹಾರ ಮತ್ತು ಉತ್ತರ ಪ್ರದೇಶದವರು ಮಹಾರಾಷ್ಟ್ರದಿಂದ ಹೊರಗೆ ಹೋಗಲಿ ಎಂದು ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಹೇಳುತ್ತಾ ಬರುತ್ತಾರೆ. ಆದರೆ ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರನ್ನು ಕೊಂದವರು ಯಾರು? ಬಿಹಾರ, ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಿಂದ ಬಂದ ಎನ್ಎಸ್‌ಜಿ ಕಮಾಂಡೋಗಳು ಈ ಕೆಲಸ ಮಾಡಿದ್ದರು. ಆಗ ಬಿಹಾರಿಗಳನ್ನು ಹೊರದಬ್ಬಿ ಎಂದು ಎಂಎನ್ಎಸ್ ಆಗಲೀ, ಶಿವಸೇನೆಯಾಗಲಿ ಹೇಳಿರಲಿಲ್ಲ ಎಂದು ರಾಹುಲ್ ಕುಟುಕಿದ್ದರು.