ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮಾಜವಾದಿ ಪಕ್ಷದಿಂದ ಅಮರ್ ಸಿಂಗ್, ಜಯಪ್ರದಾಗೆ ಕೊಕ್
(Samajwadi Party | Amar Singh | Jaya Prada | Mulayam Singh Yadav)
ಅಶಿಸ್ತಿನ ಕಾರಣಗಳನ್ನು ಮುಂದಿಟ್ಟಿರುವ ಸಮಾಜವಾದಿ ಪಕ್ಷ ನಿರೀಕ್ಷೆಯಂತೆ ತನ್ನ ಮಾಜಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್, ನಟಿ-ರಾಜಕಾರಣಿ ಜಯಪ್ರದಾ ಸೇರಿದಂತೆ ಆರು ಮಂದಿ ಶಾಸಕ-ಸಂಸದರನ್ನು ಉಚ್ಛಾಟನೆ ಮಾಡಿದೆ.
ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಅಮರ್ ಸಿಂಗ್ ಮತ್ತು ಜಯಪ್ರದಾ ಅವರನ್ನು ಪಕ್ಷದಿಂದ ಕೈಬಿಡಲು ಸಂಸದೀಯ ಮಂಡಳಿಯ ಸಭೆಯ ಸಂದರ್ಭದಲ್ಲಿ ನಿರ್ಧರಿಸಲಾಯಿತು. ಅವರಿಬ್ಬರಿಂದಾಗಿ ಪಕ್ಷದ ಘನತೆ ಮಣ್ಣು ಪಾಲಾಗುತ್ತಿತ್ತು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶಗಳಿವೆಯೇ ಎಂಬುದರ ಕುರಿತು ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಮರ್, ಜಯಪ್ರದಾ ಅಲ್ಲದೆ ಇವರಿಗೆ ನಿಷ್ಠರಾಗಿದ್ದ ಮದನ್ ಚೌಹಾನ್, ಸಂದೀಪ್ ಅಗರ್ವಾಲ್, ಅಶೋಕ್ ಚಂಡೇಲ್ ಮತ್ತು ಸರ್ವೇಶ್ ಸಿಂಗ್ ಎಂಬ ನಾಲ್ವರು ಶಾಸಕರನ್ನು ಕೂಡ ಪಕ್ಷದಿಂದ ಹೊರದಬ್ಬಲಾಗಿದೆ.
ಜಯಾಬಚ್ಚನ್ ಬಗ್ಗೆ ಪ್ರಶ್ನೆಗಳೆದ್ದಾಗ ಉತ್ತರಿಸಿದ ಮೋಹನ್ ಸಿಂಗ್, ಅವರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಹಾಗಾಗಿ ಸಮಾಜವಾದಿ ಪಕ್ಷದ ಅವಿಭಾಜ್ಯ ಅಂಗವಾಗಿ ಬಚ್ಚನ್ ಮುಂದುವರಿದಿದ್ದಾರೆ ಎಂದರು.
ಸಂಜಯ್ ದತ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸುತ್ತಾ, ಅವರು ಕೂಡ ಸಮಾಜವಾದಿ ಪಕ್ಷದಲ್ಲೇ ಇದ್ದಾರೆ ಎಂದು ತನ್ನ ಈ ಹಿಂದಿನ ಹೇಳಿಕೆಯನ್ನೇ ಪುನರುಚ್ಛರಿಸಿದರು.
ಅಮರ್ ಸಿಂಗ್ ಅವರಿಗೆ ಬೆಂಬಲ ಘೋಷಿಸಿದ ಕೆಲವೇ ದಿನಗಳಲ್ಲಿ ಜಯಪ್ರದಾ ಅವರನ್ನು ಪಕ್ಷದಿಂದ ಅವರ ರಾಜಕೀಯ ಗುರುವಿನ ಜತೆ ಉಚ್ಛಾಟಿಸಲಾಗಿದೆ. ಮೋಹನ್ ಸಿಂಗ್ ಅವರು ಕಳೆದ ಚುನಾವಣೆಯಲ್ಲಿ ಸೋತವರು, ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಹೇಗೆ ಕೊಡಲಾಯಿತು ಎಂದೂ ಜಯಪ್ರದಾ ಪ್ರಶ್ನಿಸಿದ್ದರು.
ಈ ನಡುವೆ ಕಾಂಗ್ರೆಸ್ ಕೂಡ ಅಮರ್ ಸಿಂಗ್ ಅವರ ವಿರುದ್ಧ ಹೇಳಿಕೆ ನೀಡಿದೆ. ಅವರಿಗೆ ದೇಶದಲ್ಲಿ ರಾಜಕೀಯ ಭವಿಷ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದು, ಅವರು ಸಾರ್ವಜನಿಕ ಜೀವನದಲ್ಲಿ ಯಾವುದೇ ಕೊಡುಗೆಯನ್ನು ನೀಡಿದವರಲ್ಲ ಎಂದು ಕುಟುಕಿದೆ.
ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹೊಗಳಿದ್ದ ಅಮರ್ ಸಿಂಗ್, ಆಡಳಿತ ಪಕ್ಷ ಬಹುಜನ ಸಮಾಜವಾದಿ ಪಾರ್ಟಿಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದ್ದು ಶೀಘ್ರದಲ್ಲೇ ಸಿಂಗ್ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಜತೆಗಿನ ವಿರಸದಿಂದಾಗಿ ಪಕ್ಷದ ಹುದ್ದೆಗಳಿಗೆ ಎರಡು ವಾರಗಳ ಹಿಂದೆ ಅಮರ್ ರಾಜೀನಾಮೆ ನೀಡಿದ್ದರು. ಆದರೆ ಪಕ್ಷಕ್ಕೆ ರಾಜೀನಾಮೆ ನೀಡಲು ಅವರು ನಿರಾಕರಿಸಿದ್ದರು.