ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ನಂತೆ ಬೆಳೀರಿ, ಕಲೀರಿ; ರಕ್ಷಣಾ ಸಿಬ್ಬಂದಿಗಳಿಗೆ ಐಜಿಪಿ ಪಾಠ (Madhya Pradesh | Rajendra Kumar | Ajmal Kasab | Mumbai terror attack)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ವೇಗದ ತರಬೇತಿಯ ವಿಚಾರದಲ್ಲಿ ಗುರುವಾಗಿ ಸ್ವೀಕರಿಸಿ ಎಂದು ಪೊಲೀಸರ ತರಬೇತಿ ಶಿಬಿರವೊಂದರಲ್ಲಿ ಅಧಿಕಾರಿಯೊಬ್ಬರು ಕರೆ ನೀಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

ಮಧ್ಯಪ್ರದೇಶದ ವಿಶೇಷ ಪಡೆಗಳ ಪೊಲೀಸ್ ಮಹಾನಿರ್ದೇಶಕ ರಾಜೇಂದ್ರ ಕುಮಾರ್ ಎಂಬವರು ರಕ್ಷಣಾ ಪಡೆಗಳ ತರಬೇತಿ ಶಿಬಿರವೊಂದರಲ್ಲಿ ಮಾತನಾಡುತ್ತಾ, 21ರ ಹರೆಯದ ಕಸಬ್‌‌ನನ್ನು ಉದಾಹರಿಸಿದರು. ಆತ ಪಡೆದುಕೊಂಡ ತರಬೇತಿಯ ಆವೇಗವನ್ನು ಮಾದರಿಯಾಗಿ ಸ್ವೀಕರಿಸಿ ಎಂದು ಕರೆ ನೀಡಿದರು.
PTI

ನೀವು ಅತ್ಯುತ್ತಮ ತರಬೇತಿ ಪಡೆಯಲು ಸಾಧ್ಯವಾದರೆ ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ಸೊಗಸಾದ ಉದಾಹರಣೆ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್. ಆತ ಕೇವಲ ಎಂಟನೇ ತರಗತಿಯವರೆಗೆ ಶಾಲೆಗೆ ಹೋಗಿದ್ದ ಮತ್ತು ಕೇವಲ ಒಂದು ವರ್ಷ ಮಾತ್ರ ತರಬೇತಿ ಪಡೆದಿದ್ದ. ಇದರಿಂದ ಆತ ಶಸ್ತ್ರಾಸ್ತ್ರಗಳನ್ನು, ಪೂರಕ ಸಾಧನಗಳನ್ನು ಮತ್ತು ಜಿಪಿಎಸ್ ತಂತ್ರಜ್ಞಾನಗಳನ್ನು ಬಳಸುವುದನ್ನೂ ಕಲಿತುಕೊಂಡಿದ್ದ ಎಂದು ಅವರು ವಿವರಣೆ ನೀಡಿದ್ದಾರೆ.

ಆತನಿಗೆ ಸಿಕ್ಕಿದ್ದ ಅತ್ಯುತ್ತಮ ತರಬೇತಿ ಮತ್ತು ಆತನಲ್ಲಿದ್ದ ಕಲಿಕೆಯ ಆವೇಗತೆಯಿಂದಾಗಿ ಇದೆಲ್ಲ ಸಾಧ್ಯವಾಗಿದೆ. ತನ್ನನ್ನು ತಾನು ಅತ್ಯುತ್ತಮವಾಗಿ ತಯಾರಿ ಮಾಡಿಕೊಂಡಿದ್ದರಿಂದ ಆತನಿಗೆ ಯಾವುದೇ ತಾಂತ್ರಿಕತೆಯನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂದು ರಾಜೇಂದ್ರ ಯುವ ಪೊಲೀಸರಿಗೆ ಮನದಟ್ಟು ಮಾಡಿದ್ದಾರೆ.

ಕಸಬ್‌ ಭಾರೀ ಹುರುಪನ್ನು ಹೊಂದಿದ್ದ. ಆತನಂತೆ ಸಾಧನೆ ಮಾಡಲು ನಮಗೆ ಸಾಧ್ಯವಿಲ್ಲ. ಆತನಿಗೆ ಹೋಲಿಸಿದರೆ ನಾವು ಹೆಚ್ಚು ವಿದ್ಯಾವಂತರು ಮತ್ತು ಸಾಮರ್ಥ್ಯವನ್ನು ಹೊಂದಿದವರು. ಶಸ್ತ್ರಾಸ್ತ್ರಗಳನ್ನು ಬಳಸುವುದು ಹೇಗೆ ಎಂಬುದನ್ನು ಕಸಬ್‌ನಿಂದ ಕಲಿಯಬೇಕಾಗಿದೆ ಎಂದರು.

ಇದು ತಪ್ಪರ್ಥಕ್ಕೆಡೆ ಮಾಡುತ್ತಿದೆ ಎಂಬುದನ್ನು ತಡವಾಗಿ ಅರಿತುಕೊಂಡ ಐಜಿಪಿ, ನನ್ನ ಸಲಹೆ ಕೆಟ್ಟದು ಎಂದು ಯಾರಾದರೂ ಅಂದುಕೊಂಡಿದ್ದರೆ ಕ್ಷಮಿಸಿ; ನಾನು ಹೇಳಿದ್ದು ಸಚಿನ್ ತೆಂಡೂಲ್ಕರ್ ಅವರಂತಹ ಸಾಧಕರನ್ನು, ಅವರ ಸಾಧನೆಯನ್ನು ಉದಾಹರಿಸಿ ಎಂದು ಸ್ಪಷ್ಟನೆಯನ್ನೂ ನೀಡಿದರು.

ಆದರೆ ತಾನು ಕಸಬ್‌ನನ್ನು ಹೊಗಳಿದ್ದೇನೆ ಎಂಬ ಮಾತುಗಳನ್ನು ಅವರು ತಳ್ಳಿ ಹಾಕಿದ್ದಾರೆ. ಕಸಬ್‌ನನ್ನು ನಾನು ಪ್ರಬಲವಾಗಿ ವಿರೋಧಿಸುತ್ತೇನೆ. ಆತನಿಗೆ ಸಾಧ್ಯವಾಗುವಷ್ಟು ಗರಿಷ್ಠ ಶಿಕ್ಷೆಯನ್ನೇ ನೀಡಬೇಕು. ನನ್ನ ಉದ್ದೇಶ ರಕ್ಷಣಾ ಸಿಬ್ಬಂದಿಗಳಿಗೆ ಶೂಟಿಂಗ್ ಕುರಿತು ಪ್ರೇರಣೆ ನೀಡುವುದಾಗಿತ್ತು ಎಂದಿದ್ದಾರೆ.

ಕಸಬ್ ಜತೆ ಸಚಿನ್ ತೆಂಡೂಲ್ಕರ್ ಅವರನ್ನು ಹೋಲಿಸಿರುವ ಐಜಿಪಿ, ಅವರಿಬ್ಬರದ್ದೂ ಸಾಧನೆ; ಅದು ಕೆಟ್ಟದ್ದೋ ಒಳ್ಳೆಯದ್ದೋ ಎನ್ನುವುದು ಬೇರೆ ಪ್ರಶ್ನೆ. ಅವರಲ್ಲಿ ಗುರಿಯಿತ್ತು, ಕಲಿಯುವ ಆವೇಗತೆಯಿತ್ತು. ನಮ್ಮ ದೇಶದಲ್ಲಿ ಶ್ರೀರಾಮ ಮತ್ತು ರಾವಣರನ್ನೂ ಸಾಧಕರೆಂದು ಒಪ್ಪಿಕೊಂಡಿಲ್ಲವೇ? ಅವರಿಬ್ಬರದ್ದೂ ಭಿನ್ನ ಮಾರ್ಗಗಳಿರಬಹುದು, ಆದರೆ ಸಾಧನೆಯೇ ಎಂದು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ