ಮಗು ಕೊಡೋಲ್ಲ, ತಾನು ಪತ್ನಿಯೆನ್ನುತ್ತಿದ್ದಾಳೆ ಬಾಡಿಗೆ ತಾಯಿ!
ಗಾಜಿಯಾಬಾದ್, ಬುಧವಾರ, 3 ಫೆಬ್ರವರಿ 2010( 13:18 IST )
ತನ್ನ ಒಂದು ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ಪಡೆಯಲಾಗಿತ್ತು ಎಂಬುದನ್ನು ನಿರಾಕರಿಸಿರುವ ಬಾಡಿಗೆ ತಾಯಿಯೊಬ್ಬಳು ಮಗುವನ್ನು ಹಸ್ತಾಂತರಿಸಲು ನಿರಾಕರಿಸಿದ್ದಲ್ಲದೆ, ತಾನು ಪತ್ನಿಯೆಂದು ವಾದ ಮಾಡುತ್ತಿದ್ದಾಳೆ ಎಂದು ಸಂಕಟಕ್ಕೆ ಸಿಲುಕಿರುವ ದಂಪತಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಉದ್ಯಮಿಯೊರ್ವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮಹಿಳೆ, ತಾನು ಆತನ ಪತ್ನಿ. ಹಾಗಾಗಿ ಮಗುವನ್ನು ದಂಪತಿಯ ಸುಪರ್ದಿಗೆ ನೀಡುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಒಂದು ವರ್ಷ ಹರೆಯದ ಮಗುವಿನ ಪೋಷಣೆ ಮಾಡುತ್ತಿರುವ ಮಹಿಳೆ ತನ್ನನ್ನು ರಾಣಿ ಎಂದು ಎಫ್‌ಐಆರ್‌ನಲ್ಲಿ ದಾಖಲುಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗು ಹುಟ್ಟಿತ್ತು. ಹೆರಿಗೆ ಸಂದರ್ಭದಲ್ಲಿನ ಆಸ್ಪತ್ರೆಯ ದಾಖಲೆಯ ಪ್ರಕಾರ ಮಹಿಳೆ ಮದನ್ ಲಾಲ್ ಎಂಬವರ ಪತ್ನಿ ಎಂದು ನಮೂದಾಗಿದೆ.
ಆದರೆ ಮಗುವಿನ ತಂದೆ ಮದನ್ ಲಾಲ್ ಪ್ರಕಾರ, 30ರ ಹರೆಯದ ರಾಣಿಯನ್ನು ಬಾಡಿಗೆ ತಾಯಿಯಾಗಿ ಪಡೆಯಲಾಗಿತ್ತು. ತನ್ನ ಪತ್ನಿ ಬಂಜೆಯಾದ ಕಾರಣ ಮಹಿಳೆಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಇದಕ್ಕೆ ಒಪ್ಪಿಸಲಾಗಿತ್ತು ಎಂದು ಹೇಳುತ್ತಾರೆ.
ಮಗುವನ್ನು ದಂಪತಿಗಳಿಗೆ ಹಸ್ತಾಂತರಿಸಲು ನಿರಾಕರಿಸುತ್ತಿರುವ ಮಹಿಳೆ ರಾಣಿಯೀಗ ಪುತ್ರನೊಂದಿಗೆ ತನ್ನ ದೆಹಲಿಯ ಮನೆಗೆ ಹೊರಟು ಹೋಗಿದ್ದಾಳೆ.
ಮೂರು ತಿಂಗಳ ಹಿಂದೆ ಮದನ್ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು ಮತ್ತು ಆಕೆ ಕುಟುಂಬದ ಜತೆಯೇ ವಾಸಿಸುತ್ತಿದ್ದಳು. ನಂತರ ಕೆಲವೇ ದಿನಗಳಲ್ಲಿ ತನಗೆ ಮತ್ತು ತನ್ನ ಮಗುವಿಗೆ ಪ್ರತ್ಯೇಕ ಮನೆ ಮಾಡಿಕೊಡಬೇಕು ಮತ್ತು ಮದನ್ ತನ್ನೊಂದಿಗೆ ಜೀವನ ಸಾಗಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಳು ಎಂದು ಪೊಲೀಸರು ವಿವರಿಸುತ್ತಾರೆ.
ಇಲ್ಲಿನ ಕವಿನಗರದಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ರಾಣಿ, ತನಗಿರುವ ಪತ್ನಿಯ ಸ್ಥಾನ-ಮಾನವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾಳೆ.
ಆಕೆಯ ಪ್ರಕಾರ ಮದನ್ ರಾಣಿಯನ್ನು ಕೆಳ ಸಮಯದ ಹಿಂದೆ ರಹಸ್ಯವಾಗಿ ಮದುವೆಯಾಗಿದ್ದರು. ಆದರೂ ತನ್ನ ಕಾನೂನುಬದ್ಧ ಪತ್ನಿಯ ಜತೆ ವಾಸಿಸುತ್ತಿದ್ದರು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.