ಭಾರತದ ಬಡತನವನ್ನೇ ಬಂಡವಾಳವಾಗಿಟ್ಟುಕೊಂಡಿದ್ದ 'ಸ್ಲಮ್‌ಡಾಗ್ ಮಿಲಿಯನೇರ್' ಆಸ್ಕರ್ ಬುಟ್ಟಿಗೆ ಹಾಕಿಕೊಂಡು ವಿಶ್ವಮನ್ನಣೆ ಪಡೆದುಕೊಂಡಾಗಲೇ ಇಂತಹ ಸಾಲು ಸಾಲು ಚಿತ್ರಗಳು ಬರಬಹುದೆಂಬ ನಿರೀಕ್ಷೆ ಸುಳ್ಳಾಗಿಲ್ಲ. ಈ ಬಾರಿಯೂ ಅಂತಹದ್ದೊಂದು ವಿದೇಶಿ ನಿರ್ದೇಶಕರ ಭಾರತೀಯ ಚಿತ್ರ ಆಸ್ಕರ್ ಮೆಟ್ಟಿಲೇರಿದೆ.
ಆದರೆ ಕಳೆದ ವರ್ಷದ 'ಸ್ಲಮ್‌ಡಾಗ್ ಮಿಲಿಯನೇರ್'ನಂತಹ ಭಾರೀ ಚಿತ್ರವಲ್ಲ ಇದು. ಆದರೆ ಭಾರತದ ಹುಳುಕುಗಳನ್ನು ಮೆರೆಸುವ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಚಿತ್ರದ ಹೆಸರು 'ಕವಿ', ನಿರ್ದೇಶಿಸಿದವರು ಅಮೆರಿಕಾದವರೊಬ್ಬರು. ಅಂದ ಹಾಗೆ ಇದು ಹಿಂದಿ ಭಾಷೆಯ ಚಿತ್ರ.
PR
ಹಿಂದೂಸ್ತಾನದ ದಾರಿದ್ರ್ಯವನ್ನು ಬಣ್ಣದ ಫ್ರೇಮುಗಳಲ್ಲಿ ಹಿಡಿದಿಟ್ಟು ದಿಗ್ದರ್ಶನ ಮಾಡಿಸುವ 'ಕವಿ' ಚಿತ್ರ ಕಿರು ಚಿತ್ರಗಳ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದೆ.
ಗುನೀತ್ ಮೋಂಗಾ, ಹರೀಶ್ ಅಮೀನ್ ಎಂಬ ಭಾರತೀಯರು ಮತ್ತು ಗ್ರೆಗ್ ಹೆಲ್ವೇ ನಿರ್ಮಾಪಕರಾಗಿರುವ ಈ ಚಿತ್ರದ ನಿರ್ದೇಶಕರು ಕೂಡ ಗ್ರೆಗ್. ಕ್ರಿಕೆಟ್ ಆಡಬೇಕು ಮತ್ತು ಶಾಲೆಗೆ ಹೋಗಬೇಕೆಂದು ಬಯಸುವ ಬಾಲಕನೊಬ್ಬ ಬಲವಂತವಾಗಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಬೇಕಾದ ವೃತ್ತಾಂತವನ್ನು ಈ ಚಿತ್ರ ಹೊಂದಿದೆ.
ಕಳೆದ ವರ್ಷ 'ಸ್ಲಮ್‌ಡಾಗ್ ಮಿಲಿಯನೇರ್', 'ದಿ ಫೈನಲ್ ಇಂಚ್' ಮತ್ತು 'ಸ್ಮೈಲ್ ಪಿಂಕಿ'ಗಳ ಮೂಲಕ ಭಾರತದ ದಾರಿದ್ರ್ಯವನ್ನು ಜಗತ್ತಿಗೆ ಸುಣ್ಣ-ಬಣ್ಣ ಹಚ್ಚಿ ತೋರಿಸಿ ನಿರ್ದೇಶಕ-ನಿರ್ಮಾಪಕರು ಕಿಸೆ ತುಂಬಿಸಿಕೊಳ್ಳುವುದರೊಂದಿಗೆ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದರು ಎಂಬ ಆರೋಪಗಳಿದ್ದವು.
'ಕವಿ' ಚಿತ್ರದ ಪೀಠಿಕೆಯಿದು.... ಗುಲಾಮಗಿರಿ ಈಗಲೂ ಇದೆಯೆಂಬುದು ನಿಮಗೆ ಗೊತ್ತಿದೆಯಾ? ಅಟ್ಲಾಂಟಿಕ್ ಸಾಗರದಾಚೆಗಿನ 400 ವರ್ಷಗಳ ದಾಸ್ಯೋದ್ಯಮಕ್ಕಿಂತ ಹೆಚ್ಚು ಜೀತ ಇಂದು ಕಾಣುತ್ತಿದೆ. ಅದರ ಬಗೆಗಿನ ಸಾಕಷ್ಟು ಮಾಹಿತಿಗಳು 'ಕವಿ' ಚಿತ್ರದಲ್ಲಿದೆ.
ಕವಿ ಎನ್ನುವವನು ವಿದ್ಯಾಭ್ಯಾಸ ಮಾಡಬೇಕು ಮತ್ತು ಕ್ರಿಕೆಟ್ ಆಡಬೇಕೆಂದು ಕನಸು ಕಾಣುವ ಭಾರತದ ಒಬ್ಬ ಹುಡುಗ. ಆದರೆ ಆತನನ್ನು ಬಲವಂತವಾಗಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವಂತೆ ಮಾಡಿ ಆಧುನಿಕ ದಾಸ್ಯತನಕ್ಕೆ ಒಳಪಡಿಸಲಾಗುತ್ತದೆ. ತನ್ನ ಬದುಕಿನ ಬಗ್ಗೆ ಅಸಮಾಧಾನಗೊಂಡ ಕವಿ ಅಂತಿಮ ಪರಿಣಾಮವನ್ನು ಲೆಕ್ಕಿಸದೆ ಒಂದೋ ಇದ್ದದ್ದನ್ನು ಇದ್ದ ಹಾಗೆ ಸ್ವೀಕರಿಸಬೇಕು ಅಥವಾ ಇದರ ವಿರುದ್ಧ ಹೋರಾಡಬೇಕು.
ಮುಂದೆ ಬರಲಿರುವ ದೊಡ್ಡ ಚಿತ್ರದ ಮೂಲವಸ್ತುವನ್ನಷ್ಟೇ ಈ ಕಿರು ಚಿತ್ರದಲ್ಲಿ ತೋರಿಸಲಾಗಿದೆ. ದೊಡ್ಡ ಚಿತ್ರ ನಿರ್ಮಿಸಲು ನಾವು ಆರ್ಥಿಕ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಚಿತ್ರದ ವೆಬ್‌ಸೈಟಿನಲ್ಲಿ ವಿವರಣೆ ನೀಡಲಾಗಿದೆ.
ಇಲ್ಲಿ ಕವಿ ಪಾತ್ರಧಾರಿಯಾಗಿ ಸಾಗರ್ ಸಾಲುಂಕೆ, ಸಾಮ್ರಾಟ್ ಪಾತ್ರದಲ್ಲಿ ಉಲ್ಹಾಸ್ ತಾಯಡೆ, ತಂದೆಯಾಗಿ ರಾಜೇಶ್ ಕುಮಾರ್, ತಾಯಿಯಾಗಿ ಮಾಧವಿ ಜಾವೇಕರ್, ಅರವಿಂದ್ ಪಾತ್ರದಲ್ಲಿ ದೇಬು ಭಟ್ಟಾಚಾರ್ಯ, ವಿಶಾಲ್ ಪಾತ್ರಧಾರಿಯಾಗಿ ರಿಷಿ ರಾಜ್ ಸಿಂಗ್ ಮತ್ತು ರಕ್ಷಣಾ ಸಿಬ್ಬಂದಿಯಾಗಿ ಮುಖೇಶ್ ಭಾರಹ್ತಿ ನಟಿಸಿದ್ದಾರೆ.